ADVERTISEMENT

ಕೇಂದ್ರ ಸರ್ಕಾರಿ ನೌಕರರಿಗೂ ‘ವರ್ಕ್‌ ಫ್ರಮ್‌ ಹೋಮ್‌’ ಅವಕಾಶ

ಪಿಟಿಐ
Published 19 ಮಾರ್ಚ್ 2020, 19:43 IST
Last Updated 19 ಮಾರ್ಚ್ 2020, 19:43 IST
   

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಪೈಕಿ ಶೇ 50 ಸಿಬ್ಬಂದಿಗೆ ಮನೆಯಿಂದಲೇ ಕಚೇರಿ ಕೆಲಸಗಳನ್ನು ಮಾಡಲು ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ.

‘ಗ್ರೂಪ್‌ ಬಿ ಮತ್ತು ಸಿ ಹಂತದ ಶೇ 50 ಸಿಬ್ಬಂದಿ ನಿತ್ಯವೂ ಕಚೇರಿಗೆ ಬರಬೇಕು. ಉಳಿದ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಬೇಕು. ಸಿಬ್ಬಂದಿಗೆ ಕೆಲಸದ ಸಮಯ ನಿಗದಿಪಡಿಸಬೇಕು. ಈ ವಾರ ಮನೆಯಿಂದಲೇ ಕಾರ್ಯನಿರ್ವಹಿಸಿದ ಸಿಬ್ಬಂದಿ ಮುಂದಿನ ವಾರ ಕಚೇರಿಗೆ ಬರಬೇಕು. ಕಚೇರಿಗೆ ಸ್ವಂತ ವಾಹನದಲ್ಲಿ ಬರುವ ಮತ್ತು ಮನೆ ಹತ್ತಿರ ಇರುವ ಸಿಬ್ಬಂದಿ ಈ ವಾರ ಕಚೇರಿಯಿಂದಲೇ ಕಾರ್ಯನಿರ್ವಹಿಸುವಂತೆ ರೋಸ್ಟರ್‌ ಕರಡು ರಚಿಸಬೇಕು’ ಎಂದು ಸಿಬ್ಬಂದಿ ಸಚಿವಾಲಯವು ಎಲ್ಲಾ ಸಚಿವಾಲಯದ ಮುಖ್ಯಸ್ಥರಿಗೆ(ಎಚ್‌ಒಡಿ)ನಿರ್ದೇಶಿಸಿದೆ.

ADVERTISEMENT

‘ಶೇ 50 ಸಿಬ್ಬಂದಿಯನ್ನು ನಿತ್ಯ ಮೂರು ಗುಂಪುಗಳಾಗಿ ವಿಭಜಿಸಿ, ಬೆಳಗ್ಗೆ 9 ರಿಂದ ಸಂಜೆ 5.30, ಬೆಳಗ್ಗೆ 9.30ರಿಂದ ಸಂಜೆ 6 ಹಾಗೂ ಬೆಳಗ್ಗೆ 10 ರಿಂದ ಸಂಜೆ 6.30ರವರೆಗಿನ ಪಾಳಿಯಲ್ಲಿ ಕಾರ್ಯನಿರ್ವಹಿಸುವಂತೆ’ ಸಚಿವಾಲಯವು ಸಲಹೆ ನೀಡಿದೆ.

ತಮಿಳುನಾಡುಸರ್ಕಾರದ ಕಾರ್ಯಕ್ಕೆ ರಜನೀಕಾಂತ್‌ ಶ್ಲಾಘನೆ

ಚೆನ್ನೈ: ಸೋಂಕು ವ್ಯಾಪಿಸದಂತೆ ತಡೆಯಲು ತಮಿಳುನಾಡು ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ನಟ ರಜನೀಕಾಂತ್‌ ಶ್ಲಾಘಿಸಿದ್ದಾರೆ.

ಸೋಂಕಿನ ಭೀತಿಯಿಂದಾಗಿ ದಿನನಿತ್ಯದ ಜೀವನ ನಡೆಸಲೂ ಕಷ್ಟ ಅನುಭವಿಸುತ್ತಿರುವಂಥ ಜನರಿಗೆ ಹಣಕಾಸು ನೆರವು ನೀಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ‘ಸರ್ಕಾರದ ಕ್ರಮ ಶ್ಲಾಘನೀಯ. ಸೋಂಕು ಮತ್ತಷ್ಟು ವ್ಯಾಪಿಸದಂತೆ ಸರ್ಕಾರಕ್ಕೆ ನಾವೂ ಸಹಕಾರ ನೀಡಬೇಕು’ ಎಂದು ಟ್ವಿಟರ್‌ನಲ್ಲಿ ಪ್ರಕಟಣೆಯನ್ನು ರಜನೀಕಾಂತ್‌ ಅಪ್‌ಲೋಡ್‌ ಮಾಡಿದ್ದಾರೆ.

‘ಸೂರ್ಯನ ಶಾಖಕ್ಕೆ ಮೈಯೊಡ್ಡಿ’

ನವದೆಹಲಿ: ಕೊರೊನಾ ವೈರಸ್‌ನಂಥ ವೈರಾಣುಗಳಿಂದ ರಕ್ಷಣೆ ಪಡೆಯಲು ಮತ್ತು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳು ನಿತ್ಯ 10–15 ನಿಮಿಷ ಸೂರ್ಯನ ಬೆಳಕಿಗೆ ನಿಲ್ಲಬೇಕು ಎಂದು ಆರೋಗ್ಯ ಮತ್ತು ಕುಟುಂಬ ಅಭಿವೃದ್ಧಿ ಇಲಾಖೆ ರಾಜ್ಯ ಖಾತೆ ಸಚಿವ ಅಶ್ವಿನಿ ಕುಮಾರ್‌ ಚೌಬೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಸತ್‌ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಸಿಲಲ್ಲಿ ನಿಲ್ಲುವುದರಿಂದ ದೇಹದಲ್ಲಿ ವಿಟಮಿನ್‌ ಡಿ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಸೂರ್ಯನ ಕಿರಣಗಳು ಪ್ರಖರವಾಗಿರುತ್ತವೆ. ಈ ಸಂದರ್ಭದಲ್ಲಿ ಕನಿಷ್ಠ 10–15 ನಿಮಿಷ ಬಿಸಿಲಲ್ಲಿ ಕಾಲ ಕಳೆಯಬೇಕು. ಎಲ್ಲರೂ ಇದನ್ನು ಅರಿತಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.