ADVERTISEMENT

ಕೋವಿಡ್ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ಕ್ರಮಗಳನ್ನು ವಿಶ್ವವೇ ಮೆಚ್ಚಿದೆ: ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2022, 7:28 IST
Last Updated 8 ಫೆಬ್ರುವರಿ 2022, 7:28 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ನವದೆಹಲಿ: ಸದ್ಯ ಎದುರಾಗಿರುವ ಕೋವಿಡ್–19 ಸಾಂಕ್ರಾಮಿಕದ ಸನ್ನಿವೇಶದಲ್ಲಿ ಭಾರತ ತೆಗೆದುಕೊಂಡಿರುವ ಕ್ರಮಗಳನ್ನು ಜಗತ್ತು ಶ್ಲಾಘಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಪ್ರಧಾನಿ, 'ರಾಷ್ಟ್ರಪತಿಗಳ ಭಾಷಣವು ಸ್ಥೈರ್ಯ, ಭರವಸೆ ಮತ್ತು ಸಮರ್ಪಣಾ ಭಾವದಿಂದ ಕೂಡಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ರಾಷ್ಟ್ರಪತಿಯವರು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಸಮಾಜದ ಎಲ್ಲ ವರ್ಗದ ಜನರಿಗಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ. ಇದು ನಮ್ಮಲ್ಲಿ ಸ್ಥೈರ್ಯ ಮತ್ತು ಭರವಸೆ ಮೂಡಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ನಾವು ಇಂತಹ ಹೊಸ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ.

ADVERTISEMENT

ಮುಂದುವರಿದು, 'ಕೋವಿಡ್–19 ಸಾಂಕ್ರಾಮಿಕವಾಗಿದೆ. ಮನುಕುಲವು ಕಳೆದ 100 ವರ್ಷಗಳಲ್ಲಿಯೇ ಇಂತಹ ಸಂಕಷ್ಟವನ್ನು ಕಂಡಿರಲಿಲ್ಲ. ಈ ಬಿಕ್ಕಟ್ಟು ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದ್ದು, ಜನರಿಗೆ ತೊಂದರೆ ನೀಡುತ್ತಲೇ ಇದೆ. ಇಡೀ ದೇಶ ಮತ್ತು ಜಗತ್ತು ಇದರ ವಿರುದ್ಧ ಹೋರಾಟ ಮುಂದುವರಿಸಿದೆ' ಎಂದಿದ್ದಾರೆ.

'ಕೋವಿಡ್ ಆರಂಭವಾದಾಗ, ಭಾರತದಲ್ಲಿ ಏನಾಗಬಹುದು ಎಂದು ಚರ್ಚಿಸಲಾಗುತ್ತಿತ್ತು. ಭಾರತದಿಂದ ವಿಶ್ವದ ಮೇಲೆ ಆಗಬಹುದಾದ ಪರಿಣಾಮವೇನು ಎಂದೂ ಚರ್ಚಿಸಲಾಗಿತ್ತು. ಆದರೆ, ದೇಶದ 130 ಕೋಟಿ ಜನರ ಇಚ್ಛಾಶಕ್ತಿ, ಶಿಸ್ತು ಮತ್ತು ಪರಿಶ್ರಮದಿಂದಾಗಿಭಾರತದ ಕ್ರಮಗಳು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿವೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಲಸಿಕೆ ಪಡೆದುಕೊಂಡಿರುವ ನಾಗರಿಕರು ಕೇವಲ ತಮ್ಮನ್ನು ತಾವು ಸುರಕ್ಷಿತರನ್ನಾಗಿಸಿಕೊಂಡಿಲ್ಲ. ಬದಲಾಗಿ ಬೇರೆಯವರನ್ನೂರಕ್ಷಿಸಿದ್ದಾರೆ. ಹಲವು ಪ್ರತಿಭಟನೆಗಳ ನಡುವೆಯೂ, ಲಸಿಕೆ ಅಭಿಯಾನ ಯಶಸ್ವಿಯಾಗಿರುವುದು ಶ್ಲಾಘನೀಯ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.