ADVERTISEMENT

ಕೊರೊನಾ: ಆಹಾರ ಧಾನ್ಯಗಳ ಕೊರತೆ ಅಪಾಯ

ದೇಶೀ ಬಳಕೆಗೆಂದು ಸಂಗ್ರಹಕ್ಕೆ ಮುಂದಾಗಿರುವ ಉತ್ಪಾದಕ ರಾಷ್ಟ್ರಗಳು

ರಾಯಿಟರ್ಸ್
Published 26 ಮಾರ್ಚ್ 2020, 20:15 IST
Last Updated 26 ಮಾರ್ಚ್ 2020, 20:15 IST
People queue standing in circles drawn to maintain safe distance as they wait to buy grocery items during a 21-day nationwide lockdown to limit the spreading of Coronavirus disease (COVID-19), in Kolkata, India, March 26, 2020. REUTERS/Rupak De Chowdhuri
People queue standing in circles drawn to maintain safe distance as they wait to buy grocery items during a 21-day nationwide lockdown to limit the spreading of Coronavirus disease (COVID-19), in Kolkata, India, March 26, 2020. REUTERS/Rupak De Chowdhuri   

ಸಿಂಗಪುರ (ರಾಯಿಟರ್ಸ್‌): ಕೊರೊನಾವೈರಸ್‌ ಹಾವಳಿಯ ಕಾರಣ ಜಾಗತಿಕ ಮಟ್ಟದಲ್ಲಿ ಆಹಾರ ಧಾನ್ಯಗಳ ಸಾಗಾಟಕ್ಕೆ ತಡೆ ಬಿದ್ದಿದೆ. ಇದರಿಂದ ದೀರ್ಘಾವಧಿಯಲ್ಲಿ ಹಲವು ರಾಷ್ಟ್ರಗಳಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗುವ ಅಪಾಯ ಎದುರಾಗಲಿದೆ ಎಂದು ನ್ಯಾಷನಲ್ ಆಸ್ಟ್ರೇಲಿಯನ್ ಬ್ಯಾಂಕ್‌ನ ಕೃಷಿಉದ್ಯಮ ವಿಭಾಗವು ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಕೊರೊನಾವೈರಸ್ ಕಾರಣದಿಂದ ಹಲವು ರಾಷ್ಟ್ರಗಳು ಆಹಾರ ಧಾನ್ಯಗಳ ರಫ್ತನ್ನು ಸ್ಥಗಿತಮಾಡಿವೆ. ದೇಶೀ ಬಳಕೆಯಲ್ಲಿ ಕೊರತೆ ಉಂಟಾಗದಿರಲಿ ಎಂಬುದು ಮೊದಲ ಕಾರಣ. ಸಾಗಾಟದ ವೇಳೆ ವೈರಸ್‌ ಹರಡಿದರೆ ಎಂಬುದು ಮತ್ತೊಂದು ಕಾರಣ ಎಂದು ವರದಿ ಹೇಳಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿ ರಫ್ತು ಮಾಡುವ ಭಾರತವು ಮೂರು ವಾರಗಳ ಲಾಕ್‌ಡೌನ್ ಘೋಷಣೆ ಮಾಡಿದೆ. ಹೀಗಾಗಿ ಭಾರತದಿಂದ ಆಗಬೇಕಿದ್ದ ಅಕ್ಕಿಯ ರಫ್ತು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುತ್ತಿದ್ದ ರಾಷ್ಟ್ರಗಳಲ್ಲಿ ಅಕ್ಕಿಯ ಕೊರತೆ ಎದುರಾಗಲಿದೆ. ಭಾರತದ ಅಕ್ಕಿ ರಫ್ತುದಾರರ ವ್ಯವಹಾರದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಅತಿ ಹೆಚ್ಚು ಅಕ್ಕಿ ರಫ್ತು ಮಾಡುವ ಜಗತ್ತಿನ ಮೂರನೇ ರಾಷ್ಟ್ರವಾಗಿರುವ ವಿಯೆಟ್ನಾಂ ಸಹ ಅಕ್ಕಿ ರಫ್ತನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಇದರಿಂದಲೂ ಜಗತ್ತಿನ ಬೇರೆ ದೇಶಗಳಲ್ಲಿ ಅಕ್ಕಿಯ ಕೊರತೆ ಕಾಡಲಿದೆ ಎಂದು ವರದಿ ಹೇಳಿದೆ.

ADVERTISEMENT

ಇಂಡೊನೇಷ್ಯಾವು ತಾಳೆಎಣ್ಣೆಯ ರಫ್ತನ್ನು ಕಡಿಮೆ ಮಾಡಿದೆ. ರಷ್ಯಾ ಸಹ ಸೂರ್ಯಕಾಂತಿ ಬೀಜ ಮತ್ತು ಸೂರ್ಯಕಾಂತಿ ಎಣ್ಣೆಯ ರಫ್ತಿನ ಪ್ರಮಾಣವನ್ನು ಕಡಿತ ಮಾಡಿದೆ. ಇದರಿಂದ ಹಲವು ರಾಷ್ಟ್ರಗಳಲ್ಲಿ ಖಾದ್ಯತೈಲದ ಕೊರತೆ ಉಂಟಾಗುವ ಅಪಾಯವಿದೆ. ಇಂಡೊನೇಷ್ಯಾದಿಂದ ತಾಳೆಎಣ್ಣೆ ಆಮದು ಮಾಡಿಕೊಳ್ಳುವ ಭಾರತಕ್ಕೂ ಇದರ ಬಿಸಿ ತಟ್ಟಲಿದೆ ಎಂದು ವರದಿ ಹೇಳಿದೆ.

ಇದರ ಬೆನ್ನಲ್ಲೇ ಇರಾಕ್, ತನಗೆ 2.5 ಲಕ್ಷ ಟನ್ ಅಕ್ಕಿ ಮತ್ತು 10 ಲಕ್ಷ ಟನ್‌ನಷ್ಟು ಗೋದಿಯ ಅವಶ್ಯಕತೆ ಇದೆ ಎಂದು ಘೋಷಿಸಿದೆ. ರಾಷ್ಟ್ರದ ಒಳಗೆ ಆಹಾರ ಧಾನ್ಯ ಸಂಗ್ರಹಗಾರವನ್ನು ಸ್ಥಾಪಿಸಲು ಇರಾಕ್ ಮುಂದಾಗಿದೆ. ಬೇರೆ ದೇಶಗಳೂ ಇದಕ್ಕಾಗಿ ಕಾರ್ಯಯೋಜನೆ ರೂಪಿಸುತ್ತಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆದರೆ, ಇದರಿಂದ ನಾಗರಿಕರು ಗಾಬರಿಯಾಗುವ ಅವಶ್ಯಕತೆ ಇಲ್ಲ. ಹಲವು ರಾಷ್ಟ್ರಗಳು 1–2 ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳ ಸಂಗ್ರಹ ಹೊಂದಿವೆ. ಈ ಅವಧಿ ಮುಗಿಯುವ ಹೊತ್ತಿಗೆ ಆಹಾರ ಧಾನ್ಯಗಳ ರಫ್ತು–ಆಮದು ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.