ADVERTISEMENT

ಈ ವರ್ಷಾಂತ್ಯಕ್ಕೆ ವಿಶ್ವದ ಅತ್ಯಂತ ಎತ್ತರದ ರೈಲು ಸೇತುವೆ ಸಿದ್ಧ

ಜಮ್ಮು ಮತ್ತು ಕಾಶ್ಮೀರದ ಚೆನಾಬ್‌ ನದಿಯ ಮೇಲೆ ನಿರ್ಮಿಸಿರುವ ಸೇತುವೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 9:50 IST
Last Updated 6 ಮಾರ್ಚ್ 2021, 9:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಪ್ಯಾರಿಸ್‌ನ ಐಫೆಲ್‌ ಗೋಪುರಕ್ಕಿಂತ 35 ಮೀಟರ್‌ನಷ್ಟು ಎತ್ತರವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತ್ಯಂತ ಎತ್ತರದ ರೈಲು ಸೇತುವೆ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿರುವ ಈ ರೈಲು ಸೇತುವೆ ಮೇಲೆ ಕಾಟ್ರಾ – ಬನಿಹಾಲ್ ರೈಲು ಮಾರ್ಗ ಹಾದು ಹೋಗಿದೆ. 1.3 ಕಿ.ಮೀ ಉದ್ದದ ಈ ಸೇತುವೆಯ ನಿರ್ಮಾಣಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಸೇತುವೆ ನಿರ್ಮಾಣ ಕಾರ್ಯ 2004 ರಲ್ಲಿ ಆರಂಭವಾಗಿತ್ತು. ಸುಮಾರು 1,300 ಕಾರ್ಮಿಕರು ಮತ್ತು 300 ಎಂಜಿನಿಯರ್‌ಗಳು ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಆಳವಾದ ಕಮರಿಯ ಮೇಲೆ ಸೇತುವೆ ನಿರ್ಮಾಣವಾಗುತ್ತಿದೆ. ಸೇತುವೆ ಮುಖ್ಯ ಕಮಾನಿನ ಎತ್ತರ 476 ಮೀಟರ್‌. ಇದು ಭಾರತದಲ್ಲೇ ಅತ್ಯಂತ ಎತ್ತರದ ಕಮಾನು ಆಗಿದೆ. ಈ ಕಮಾನಿನ ಕೆಲಸ ಮುಗಿದ ಮೇಲೆ, ವಯಾಡಕ್ಟ್‌ ಮೂಲಕ ಹಳಿಗಳ ಜೋಡಣೆ ಕಾರ್ಯ ಆರಂಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕೂಲ ಹವಾಮಾನ ಮತ್ತು ಭೂಪ್ರದೇಶಗಳಲ್ಲಿರುವ ಸವಾಲುಗಳಿಂದಾಗಿ ಸೇತುವೆ ನಿರ್ಮಾಣಕಾರ್ಯ ವಿಳಂಬವಾಗುತ್ತಿದೆ. ಈ ಚೆನಾಬ್‌ ನದಿ ಮೇಲ್ಭಾಗದಲ್ಲಿ ನಿರ್ಮಿಸುತ್ತಿರುವ ಸೇತುವೆಯ ಜೀವಿತಾವಧಿ ಸುಮಾರು 120 ವರ್ಷಗಳು.

ಉದಂಪುರ್–ಶ್ರೀನಗರ– ಬಾರಾಮುಲ್ಲಾ ರೈಲು ಲಿಂಕ್‌ ಯೋಜನೆಯಡಿ, ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) 111 ಕಿಲೋಮೀಟರ್ ವಿಸ್ತಾರದ ರೈಲು ಹಳಿ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹೊತ್ತಿದೆ.

ಚೆನಾಬ್‌ ನದಿಯ ಉದ್ದಕ್ಕೂ ನಿರ್ಮಾಣವಾಗುತ್ತಿರುವ ಈ ಸೇತುವೆಯಲ್ಲಿ 469 ಮೀಟರ್ ಎತ್ತರದ ಕಮಾನಿನ ಜತೆಗೆ, 17 ಸ್ಪಾನ್‌(ಬದಿಗಳು)ಗಳಿವೆ. ಸೇತುವೆ ನಿರ್ಮಾಣಕ್ಕೆ ಉಕ್ಕು ಬಳಸಲಾಗಿದ್ದು, ಇದು ಖರ್ಚನ್ನು ತಗ್ಗಿಸುವ ಜತೆಗೆ, ಗಂಟೆಗೆ 200 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯನ್ನು ತಡೆಯುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಕಾಶ್ಮೀರದ ಜನರು ಈ ರೈಲ್ವೆ ಸೇತುವೆ ಮುಗಿಯುವುದನ್ನು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಈ ವರ್ಷಾಂತ್ಯದ ವೇಳೆಗೆ ಚೆನಾಬ್ ಸೇತುವೆ ಪೂರ್ಣಗೊಳ್ಳುವ ಭರವಸೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೇತುವೆ ನಿರ್ಮಾಣವಾದರೆ, ಜಮ್ಮ ಮತ್ತು ಕಾಶ್ಮೀರ ರಾಜ್ಯದ ಹಲವು ಕಣಿವೆಗಳನ್ನು ದೇಶದ ವಿವಿಧ ರಾಜ್ಯಗಳಿಗೆ ಸುಲಭವಾಗಿ ಸಂಪರ್ಕ ಕಲ್ಪಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.