ನವದೆಹಲಿ: ‘ಉದ್ಯೋಗಕ್ಕಾಗಿ ಹಣ’ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆ ನಡೆಯುತ್ತಿರುವಂತೆಯೇ ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರು ಸಚಿವ ಸ್ಥಾನದಲ್ಲಿ ಮುಂದುವರಿದಿರುವುದಕ್ಕೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
‘ಒಬ್ಬ ವ್ಯಕ್ತಿಯು ಜಾಮೀನಿನಲ್ಲಿ ಬಿಡುಗಡೆಯಾದ ತಕ್ಷಣವೇ ಸಚಿರಾಗುತ್ತಾರೆ ಎಂದಾದರೆ, ಇದರಲ್ಲಿ ಏನೋ ಭಾರಿ ತಪ್ಪು ಇದೆ’ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ವಿಭಾಗೀಯ ಪೀಠ ಶುಕ್ರವಾರ ಹೇಳಿದೆ.
ಈ ಪ್ರಕರಣದಲ್ಲಿ ಎಷ್ಟು ಸಾಕ್ಷಿಗಳ ವಿಚಾರಣೆ ಬಾಕಿಯಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಪೀಠವು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಒಟ್ಟು ಎಷ್ಟು ಮಂದಿ ಸಂತ್ರಸ್ತರಿದ್ದಾರೆ ಎಂಬ ಮಾಹಿತಿ ನೀಡುವಂತೆ ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಸೂಚಿಸಿತು.
‘ಪ್ರಕರಣದ ಬಹುತೇಕ ಸಾಕ್ಷಿಗಳು ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ಸಾಮಾನ್ಯ ಜನರು ಇಲ್ಲಿ ಸಂತ್ರಸ್ತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆರೋಪಿ ಸ್ಥಾನದಲ್ಲಿರುವವರು ಸಚಿವ ಸ್ಥಾನದಲ್ಲಿ ಮುಂದುವರಿದರೆ ಸಾಕ್ಷಿಗಳು ಎಷ್ಟರ ಮಟ್ಟಿಗೆ ಸ್ವತಂತ್ರರಿರುತ್ತಾರೆ’ ಎಂದು ಪ್ರಶ್ನಿಸಿದ ಪೀಠ ಮುಂದಿನ ವಿಚಾರಣೆಯನ್ನು ಜ.15ಕ್ಕೆ ನಿಗದಿಪಡಿಸಿತು.
‘ಈ ಪ್ರಕರಣದ ಬಹುತೇಕ ಪ್ರಾಸಿಕ್ಯೂಷನ್ ಸಾಕ್ಷಿಗಳು ಸರ್ಕಾರಿ ಅಧಿಕಾರಿಗಳಾಗಿದ್ದಾರೆ ಮತ್ತು ಪ್ರತಿವಾದಿ ಸಚಿವರು ಮೂರು ಖಾತೆಗಳನ್ನು ಹೊಂದಿದ್ದಾರೆ. ಸಚಿವರಿಗೆ ಜಾಮೀನು ಮಂಜೂರು ಮಾಡಿರುವುದರಿಂದ ಸಾಕ್ಷಿಗಳಲ್ಲಿ ಒಬ್ಬರು ಭಯದಿಂದ ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದಾರೆ’ ಎಂದು ಸಂತ್ರಸ್ತರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣ ಅವರು ಪೀಠಕ್ಕೆ ತಿಳಿಸಿದರು.
ತಮಿಳುನಾಡಿನ ಸಚಿವ ಸೆಂಥಿಲ್ ಬಾಲಾಜಿ ಅವರಿಗೆ ಜಾಮೀನು ಮಂಜೂರು ಮಾಡಿ ನೀಡಿದ್ದ ಆದೇಶವನ್ನು ಹಿಂಪಡೆಯುವಂತೆ ಜಾರಿ ನಿರ್ದೇಶನಾಲಯವು ಕಳೆದ ವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.