ADVERTISEMENT

ಪಾಕ್ ಜತೆಗೆ ಮಾತುಕತೆಗೆ ಸಲಹೆ: ಫಾರೂಕ್ ಅಬ್ದುಲ್ಲಾ ವಿರುದ್ಧ ಅಮಿತ್ ಶಾ ವಾಗ್ದಾಳಿ

ಜಮ್ಮು–ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ

ಪಿಟಿಐ
Published 25 ಅಕ್ಟೋಬರ್ 2021, 11:44 IST
Last Updated 25 ಅಕ್ಟೋಬರ್ 2021, 11:44 IST
ಅಮಿತ್ ಶಾ
ಅಮಿತ್ ಶಾ   

ಶ್ರೀನಗರ: ಕೇಂದ್ರ ಸರ್ಕಾರವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕೆಂದು ಸಲಹೆ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ನಾವು ಇಲ್ಲಿನ ಯುವಜನರೊಂದಿಗೆ ಮಾತನಾಡಿ, ದೇಶದಲ್ಲೇ ಈ ರಾಜ್ಯವನ್ನು ಅತ್ಯಂತ ಅಭಿವೃದ್ಧಿ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಮೂರು ದಿನಗಳ ಜಮ್ಮು ಮತ್ತು ಕಾಶ್ಮೀರದ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರು ವಿವಿಧ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಎಸ್‌ಕೆಐಸಿಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರವು ಪಾಕಿಸ್ತಾನದೊಂದಿಗೆ ಮಾತನಾಡಬೇಕೆಂದು ಫಾರೂಕ್ ಅಬ್ದುಲ್ಲಾ ಸಲಹೆ ನೀಡಿರುವ ವಿಷಯವನ್ನು ಪತ್ರಿಕೆಗಳಲ್ಲಿ ಓದಿದೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವರು ಸ್ವತಂತ್ರರು. ಆದರೆ, ನಮ್ಮ ಸರ್ಕಾರವು ಪಾಕಿಸ್ತಾನದ ಬದಲು ಕಾಶ್ಮೀರದ ಯುವಜನರೊಂದಿಗೆ ಮಾತನಾಡಲು ಬಯಸುತ್ತದೆ’ಎಂದರು.

ADVERTISEMENT

‘ಇಸ್ಲಾಮಾಬಾದ್ ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆಯನ್ನು ಪ್ರತಿಪಾದಿಸುವವರನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಏನು ಮಾಡಿದೆ ಎಂದು ಕೇಳಬೇಕು. 2024ರ ವೇಳೆಗೆ ನಮ್ಮ ಪ್ರಯತ್ನಗಳ ಫಲವನ್ನು ನೀವು ನೋಡುತ್ತೀರಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಗಳ ಹೆಸರನ್ನು ಉಲ್ಲೇಖಿಸದ ಶಾ ಅವರು, ‘ಜಮ್ಮು ಮತ್ತು ಕಾಶ್ಮೀರವನ್ನು ಆಳಿದ ಮೂರು ಕುಟುಂಬಗಳು ಕೇವಲ ಮೂರು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು 7 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 20 ಸಾವಿರ ಜನರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.