ADVERTISEMENT

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್‌ಭೂಷಣ್‌ಗೆ ದೆಹಲಿ ಕೋರ್ಟ್ ಸಮನ್ಸ್‌

ಪಿಟಿಐ
Published 7 ಜುಲೈ 2023, 23:30 IST
Last Updated 7 ಜುಲೈ 2023, 23:30 IST
ಬ್ರಿಜ್ ಭೂಷಣ್ ಶರಣ್ ಸಿಂಗ್
ಬ್ರಿಜ್ ಭೂಷಣ್ ಶರಣ್ ಸಿಂಗ್   

ನವದೆಹಲಿ: ‌ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರಿಗೆ ದೆಹಲಿ ನ್ಯಾಯಾಲಯ ಇದೇ 18ರಂದು ಹಾಜರಾಗುವಂತೆ ಶುಕ್ರವಾರ ಸಮನ್ಸ್‌ ನೀಡಿದೆ. 

ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷ್ಯಾಧಾರಗಳು ಇವೆ ಎಂದೂ ನ್ಯಾಯಾಲಯವು ಹೇಳಿದೆ.

ಆರೋಪಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಕೋರ್ಟ್‌ನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಹರ್ಜಿತ್ ಸಿಂಗ್ ಜಸ್ಪಾಲ್ ಅವರು ಜುಲೈ 18ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬ್ರಿಜ್‌ಭೂಷಣ್ ಹಾಗೂ ಕುಸ್ತಿ ಫೆಡರೇಷನ್‌ನಿಂದ ಅಮಾನತಾಗಿರುವ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರಿಗೆ ನಿರ್ದೇಶನ ನೀಡಿದ್ದಾರೆ. 

ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ವಿರುದ್ಧ ಈಗಾಗಲೇ ದೆಹಲಿ ನಗರ ಪೊಲೀಸರು ಐಪಿಸಿ ಸೆಕ್ಷನ್‌ 354 (ಹೆಣ್ಣಿನ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), ಸೆಕ್ಷನ್‌ 354 (ಎ) (ಲೈಂಗಿಕ ಕಿರುಕುಳ) ಹಾಗೂ 354 (ಡಿ) (ಹಿಂಬಾಲಿಸುವುದು) ಹಾಗೂ 506 (ಬೆದರಿಕೆ ಒಡ್ಡುವುದು) ಅಡಿ ಜೂನ್ 15ರಂದು ಪ್ರಕರಣ ದಾಖಲಿಸಿದ್ದಾರೆ. 

ವಿನೋದ್ ತೋಮರ್ ಅವರ ವಿರುದ್ಧವೂ ಐಪಿಸಿ ಸೆಕ್ಷನ್ 109 (ಯಾವುದೇ ರೀತಿಯ ಅಪರಾಧಕ್ಕೆ ಕುಮ್ಮಕ್ಕು ನೀಡುವುದು, ಕೃತ್ಯಕ್ಕೆ ಪ್ರಚೋದನೆ ನೀಡುವುದು) ಐಪಿಸಿ ಸೆಕ್ಷನ್‌ 354,  354 (ಎ)ಹಾ‌ಗೂ 506 ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.