ಪ್ರಾತಿನಿಧಿಕ ಚಿತ್ರ
ಲಖನೌ (ಉತ್ತರ ಪ್ರದೇಶ): ತನ್ನ ಅಣ್ಣನಿಂದ ಹಣ ವಸೂಲಿ ಮಾಡುವುದಕ್ಕಾಗಿ ಅಪಹರಣದ ನಾಟಕವಾಡಿದ ವ್ಯಕ್ತಿಯೊಬ್ಬ, ಹಣಕ್ಕೆ ಬೇಡಿಕೆ ಇಟ್ಟ ಟಿಪ್ಪಣಿಯಲ್ಲಿ ಮಾಡಿದ ಅಕ್ಷರ ದೋಷದಿಂದಾಗಿ (ಸ್ಪೆಲ್ಲಿಂಗ್ ಮಿಸ್ಟೇಕ್) ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಬುಧವಾರ ಈ ಮಾಹಿತಿ ನೀಡಿದ್ದಾರೆ.
ಹರ್ದೋಯಿ ಜಿಲ್ಲೆಯ ಬಂದಾರಹ ಗ್ರಾಮದ ಗುತ್ತಿಗೆದಾರ ಸಂಜಯ್ ಕುಮಾರ್ ಅವರು, ತಮ್ಮ ಸಹೋದರನನ್ನು (ಸಂದೀಪ್) ಅಪಹರಿಸಲಾಗಿದೆ ಎಂದು ಜನವರಿ 5ರಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಪಹರಣಕಾರರು ಅಪರಿಚಿತ ಸಂಖ್ಯೆಯಿಂದ ಸಂದೇಶ ಕಳುಹಿಸಿದ್ದು, ₹ 5,000ಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ, ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಸಂದೀಪ್ ಅವರ ಕೈ–ಕಾಲುಗಳನ್ನು ಕಟ್ಟಿರುವ 13 ಸೆಕೆಂಡ್‌ಗಳ ವಿಡಿಯೊವನ್ನೂ ಸಂಜಯ್ ಅವರಿಗೆ ಕಳುಹಿಸಲಾಗಿತ್ತು.
ಅದರಂತೆ, ವಿಡಿಯೊ ಹಾಗೂ ಸಂದೇಶವನ್ನು ಪರಿಶೀಲಿಸಿದಾಗ, ಅಪಹರಣದ ನಾಟಕ ಬಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ಅವರು ತಿಳಿಸಿದ್ದಾರೆ.
'ಸಂಜಯ್ ಕುಮಾರ್ ಅವರಿಗೆ ಬಂದ ಸಂದೇಶವನ್ನು ಗಮನಿಸಿದಾಗ, Death (ಸಾವು) ಪದವನ್ನು Deth ಎಂದು ಬರೆದಿರುವುದು ಗೊತ್ತಾಗಿತ್ತು. ಇದರಿಂದಾಗಿ, ಅಪಹರಣಕಾರರು ಹೆಚ್ಚು ಓದಿದವರಲ್ಲ ಎಂಬ ಸುಳಿವು ಸಿಕ್ಕಿತ್ತು. ಸಂಜಯ್ ಅವರಿಗೆ ಯಾರೊಂದಿಗೂ ವೈರತ್ವ ಇಲ್ಲ. ಅಲ್ಲದೆ, ಬೇಡಿಕೆ ಇಟ್ಟಿರುವ ಹಣವೂ ದೊಡ್ಡದೇನಲ್ಲ ಎಂಬುದು ನಮ್ಮ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು' ಎಂದಿದ್ದಾರೆ.
'ಮೊಬೈಲ್ ನಂಬರ್‌ನ ಲೊಕೇಷನ್ ಜಾಡು ಹಿಡಿದಾಗ, ಸಂದೀಪ್ ರುಪಾಪುರ್‌ನಲ್ಲಿರುವುದು ತಿಳಿದುಬಂದಿತ್ತು. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು. ಹಣಕ್ಕೆ ಬೇಡಿಕೆ ಇಟ್ಟಿದ್ದ ಸಂದೇಶದಲ್ಲಿದ್ದ ಮಾಹಿತಿಯನ್ನು ತಿಳಿಸಿ ಅದನ್ನು ಬರೆಯುವಂತೆ ಹೇಳಿದಾಗ, ಆತ Death ಅನ್ನು ಮತ್ತೆ Deth ಎಂದೇ ಬರೆದಿದ್ದ. ಇದರೊಂದಿಗೆ, ಇದೆಲ್ಲ ನಾಟಕ ಎಂಬುದು ಸ್ಪಷ್ಟವಾಯಿತು. ಆದಾಗ್ಯೂ ವಿಚಾರಣೆ ಮುಂದುವರಿಸಿದಾಗ, ಅಣ್ಣನಿಂದ ಹಣ ವಸೂಲಿ ಮಾಡುವ ಉದ್ದೇಶ ಹೊಂದಿದ್ದಾಗಿ ಹಾಗೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಸಿಐಡಿ' ನೋಡಿ ಈ ಉಪಾಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ' ಎಂದು ವಿವರಿಸಿದ್ದಾರೆ.
ಸದ್ಯ ಸಂದೀಪನನ್ನು ಬಂಧಿಸಲಾಗಿದೆ.
ಮಿರ್ಜಾಪುರದ ಕಬ್ಬಿನ ಜ್ಯೂಸ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡಿಕೊಂಡಿರುವ ಸಂದೀಪನ ಬೈಕ್, ಕಳೆದವರ್ಷ ಡಿಸೆಂಬರ್ 30ರಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿಯಾಗಿತ್ತು. ಸಂತ್ರಸ್ತ ವ್ಯಕ್ತಿಯ ಕಾಲಿಗೆ ಪೆಟ್ಟಾಗಿತ್ತು. ಅವರು, ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರಿಂದ, ಸಂದೀಪ್‌ಗೆ ಹಣದ ಅವಶ್ಯಕತೆ ಎದುರಾಗಿತ್ತು. ಹೀಗಾಗಿ, ಅಪಹರಣದ ನಾಟಕವಾಡಿದ್ದ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.