ADVERTISEMENT

ಗುಜರಾತ್‌ನ ಹೆಚ್ಚು ಸಾವಿಗೆ ಕಾರಣ ‘ಎಲ್’‌ ಮಾದರಿಯ ಕೊರೊನಾ ವೈರಸ್‌!

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 15:32 IST
Last Updated 26 ಏಪ್ರಿಲ್ 2020, 15:32 IST
   

ಅಹಮದಾಬಾದ್: ಗುಜರಾತ್‌ನಲ್ಲಿ ಕೋವಿಡ್‌ ಮಹಾಮಾರಿಗೆ ಹೆಚ್ಚು ಬಲಿಯಾಗಲು ‘ಎಲ್‌’ ಮಾದರಿಯ ಕೊರೊನಾ ವೈರಸ್‌ಗಳು ಕಾರಣವಿರಬಹುದು ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವೈರಸ್‌ನ ಉಗಮ ಸ್ಥಾನ ಎನ್ನಲಾದ ಚೀನಾದ ವುಹಾನ್‌ನಲ್ಲಿ ‘ಎಲ್‌’ ಮಾದರಿಯ ಕೊರೊನಾ ವೈರಸ್‌ ಹೆಚ್ಚು ಪ್ರಚಲಿತದಲ್ಲಿದ್ದವು.

‘ಎಲ್‌’ ಮಾದರಿಯ ಕೊರೊನಾ ವೈರಸ್‌ಗಳು ‘ಎಸ್‌’ ಮಾದರಿಯ ಕೊರೊನಾ ವೈರಸ್‌ಗಿಂತಲೂ ಹೆಚ್ಚು ಆಕ್ರಮಣಕಾರಿ, ಅಪಾಯಕಾರಿ ಎಂದು ಹೇಳಲಾಗಿದೆ.

ADVERTISEMENT

ಈ ಕುರಿತು ಮಾತನಾಡಿರುವ ಗುಜರಾತ್‌ನ ಜೈವಿಕ ಸಂಶೋಧನಾ ಕೇಂದ್ರದ ನಿರ್ದೇಶಕ ಸಿ.ಜಿ ಜೋಶಿ, ‘ಕೊರೊನಾ ವೈರಸ್‌ನಿಂದಾಗಿ ಎಲ್ಲಿ ಹೆಚ್ಚಿನ ಸಾವು ಸಂಭವಿಸುತ್ತವೆಯೋ ಅಲ್ಲಿ ‘ಎಲ್‌’ ಮಾದರಿಯ ಕೊರೊನಾ ವೈರಸ್‌ ಹೆಚ್ಚಾಗಿರಬಹುದು ಎಂದು ವಿದೇಶದ ವಿಜ್ಞಾನಿಗಳು ನಡೆಸಿರುವ ಅಧ್ಯಯನಗಳಿಂದ ತಿಳಿದು ಬಂದಿದೆ. ಈ ಮಾದರಿಯ ವೈರಸ್‌ಗಳು ವುಹಾನ್‌ನಲ್ಲಿ ಹೆಚ್ಚು ಪ್ರಬಲವಾಗಿದ್ದವು,’ ಎಂದು ಹೇಳಿದ್ದಾರೆ.

‘ರೋಗಿಯೊಬ್ಬರಿಂದ ಸಂಗ್ರಹಿಸಲಾಗಿದ್ದ ಮಾದರಿಯಲ್ಲಿ ‘ಎಲ್‌’ ಮಾದರಿಯ ಕೊರೊನಾ ವೈರಸ್‌ ಪತ್ತೆಯಾಗಿತ್ತು. ಇದು ಹೆಚ್ಚು ಪ್ರಬಲ ಮತ್ತು ಅಪಾಯಕಾರಿ,’ ಎಂದೂ ಅವರು ಹೇಳಿದ್ದಾರೆ.

‘ಕೊರೊನಾ ವೈರಸ್‌ನ ಬದಲಾವಣೆಯು ಅದರ ಸಂಖ್ಯೆ ಮತ್ತು ಶೇಖಡಾವಾರು ರೂಪಾಂತರದ ಮೇಲೆ ಅವಲಂಬಿತವಾಗಿರುತ್ತದೆ. ಈ ವರೆಗಿನ ಅಧ್ಯಯನಗಳ ಪ್ರಕಾರ ಎಲ್ಲಿ ಹೆಚ್ಚಿನ ಸಾವು ಸಂಭವಿಸುತ್ತದೆಯೋ ಅಲ್ಲಿ ‘ಎಲ್‌’ ಮಾದರಿಯ ಕೊರೊನಾ ವೈರಸ್‌ ಅಸ್ತಿತ್ವದಲ್ಲಿ ಇರುತ್ತದೆ,’ ಎಂದು ಹೇಳಲಾಗಿದೆ.

ಗುಜರಾತ್‌ನ ಜೈವಿಕ ಸಂಶೋಧನಾ ವಿಭಾಗವೂ ಇತ್ತೀಚೆಗೆ ವೈರಸ್‌ನ ವರ್ಣತಂತುಗಳನ್ನು ಅಧ್ಯಯನ ಮಾಡಿದ್ದು, ಈ ವರೆಗೆ ಮೂರು ಹೊಸ ರೂಪಾಂತರುಗಳು ಗೋಚರಿಸಿವೆ ಎಂದು ಹೇಳಲಾಗಿದೆ.

ಸದ್ಯ ಗುಜರಾತ್‌ನಲ್ಲಿ3071 ಮಂದಿ ಸೋಂಕಿಗೆ ಗುರಿಯಾಗಿದ್ದು,133 ಮಂದಿ ಸಾವಿಗೀಡಾಗಿದ್ದಾರೆ.282 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.