ADVERTISEMENT

ಭಾರತದಲ್ಲಿ ಖಾತೆಗಳ ಸ್ಥಗಿತ ಆದೇಶ ಅತ್ಯಂತ ಕಳವಳಕಾರಿ: ‘ಎಕ್ಸ್‌’

ಏಜೆನ್ಸೀಸ್
Published 8 ಜುಲೈ 2025, 15:48 IST
Last Updated 8 ಜುಲೈ 2025, 15:48 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ರಾಯಿಟರ್ಸ್‌ ಸುದ್ದಿಸಂಸ್ಥೆಯ ಎರಡು ಖಾತೆಗಳು ಸೇರಿದಂತೆ 2,355  ಖಾತೆಗಳನ್ನು ಸ್ಥಗಿತಗೊಳಿಸುವಂತೆ ಭಾರತ ಸರ್ಕಾರ ಜುಲೈ 3ರಂದು ಹೊರಡಿಸಿದ ಆದೇಶವು ‘ಅತ್ಯಂತ ಕಳವಳಕಾರಿ‌ ಸಂಗತಿ’ ಎಂದು ಇಲಾನ್‌ ಮಸ್ಕ್‌ ಒಡೆತನದ ‘ಎಕ್ಸ್‌’ ಹೇಳಿದೆ.

ಸಾಮಾಜಿಕ ಜಾಲತಾಣಗಳ ನಿರ್ಬಂಧ ಸೇರಿದಂತೆ ಭಾರತದಲ್ಲಿ ಮುಂದುವರಿದಿರುವ ‘ಮಾಧ್ಯಮ ಸೆನ್ಸಾರ್‌ಶಿಪ್‌’ ಬಗ್ಗೆಯೂ ‘ಎಕ್ಸ್‌’ ಆತಂಕ ವ್ಯಕ್ತಪಡಿಸಿದೆ. 

ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಸ್ಥಗಿತಗೊಳಿಸಿದ ಬಗ್ಗೆ ವಿವರಣೆ ನೀಡಿರುವ ‘ಎಕ್ಸ್‌’ನ ಜಾಗತಿಕ ವ್ಯವಹಾರಗಳ ತಂಡ, ’ಯಾವುದೇ ಸಮರ್ಥನೆ ನೀಡದೆ, ತುರ್ತಾಗಿ ಒಂದು ಗಂಟೆಯೊಳಗೆ  ರಾಯಿಟರ್ಸ್‌, ರಾಯಿಟರ್ಸ್‌ ವರ್ಲ್ಡ್‌ ಸೇರಿದಂತೆ  2,355 ಎಕ್ಸ್‌ ಖಾತೆಗಳನ್ನು ಸ್ಥಗಿತಗೊಳಿಸಬೇಕು. ಮುಂದಿನ ಆದೇಶದವರೆಗೆ ಈ ಖಾತೆಗಳ ಮೇಲಿನ ನಿರ್ಬಂಧ ಮುಂದುವರಿಸಬೇಕು’ ಎಂದು ಭಾರತ ಎಲೆಕ್ಟ್ರಾನಿಕ್‌ ಸಚಿವಾಲಯ ಜುಲೈ 3ರಂದು ಆದೇಶ ಹೊರಡಿಸಿತ್ತು’ ಎಂದು ಹೇಳಿದೆ.

ADVERTISEMENT

ಸ್ಥಗಿತಗೊಳಿಸಲಾಗಿದ್ದ ಖಾತೆಗಳನ್ನು ‘ಎಕ್ಸ್‌’ ಕೆಲವೇ ಗಂಟೆಗಳಲ್ಲಿ ಪುನಃಸ್ಥಾಪಿಸಿತ್ತು. ಆದರೆ, ಭಾರತ ಸರ್ಕಾರ ಎಕ್ಸ್‌  ಖಾತೆ ಸ್ಥಗಿತದ ಹಿಂದಿನ ತನ್ನ ಪಾತ್ರವನ್ನು ಸ್ಪಷ್ಟವಾಗಿ ಅಲ್ಲಗಳೆದಿತ್ತು.  

ಸಾಮಾಜಿಕ ಜಾಲತಾಣಗಳಿಂದ ವಿಡಿಯೊ, ಚಿತ್ರ, ಬರಹ ತೆಗೆದುಹಾಕುವಂತೆ ಬೇಡಿಕೆ ಸಲ್ಲಿಸುತ್ತಿರುವ  ದೇಶಗಳ ಪಟ್ಟಿಯಲ್ಲಿ ಭಾರತವು 5ನೇ ಸ್ಥಾನದಲ್ಲಿದೆ.

’ಲಭ್ಯವಿರುವ ಕಾನೂನಿನ ಎಲ್ಲ ಆಯ್ಕೆಗಳನ್ನು ನಾವೂ ಪರಿಶೀಲಿಸುತ್ತಿದ್ದೇವೆ. ಭಾರತದಲ್ಲಿ ತೊಂದರೆಗೊಳಗಾಗಿರುವ ಬಳಕೆದಾರರು ಕೋರ್ಟ್‌ ಮೂಲಕ ಕಾನೂನಿನ ನೆರವು ಪಡೆದುಕೊಳ್ಳಬಹುದು ಎಂದು ’ಎಕ್ಸ್‌’ ಹೇಳಿದೆ.   

’ಪ್ರಚೋದನಕಾರಿ’ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾರತವು ಕಳೆದ ಏಪ್ರಿಲ್‌ನಲ್ಲಿ 12ಕ್ಕೂ ಹೆಚ್ಚು ಪಾಕಿಸ್ತಾನಿ ಯೂಟ್ಯೂಬ್‌ ಚಾನೆಲ್‌ಗಳ ಮೇಲೆ ನಿರ್ಬಂಧ ಹೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.