ನವದೆಹಲಿ: ದೇಶದಲ್ಲಿನ ಸಾಮಾಜಿಕ ಜಾಲತಾಣಗಳ ನಿಯಂತ್ರಣದ ಕುರಿತು ತನ್ನ ಸೂಚನೆಗಳನ್ನು ಪಾಲಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ‘ಎಕ್ಸ್’ ನಿರ್ಧರಿಸಿದೆ.
‘ವಿಷಯ ತೆಗೆದುಹಾಕಲು ಪೊಲೀಸರು ಹೊರಡಿಸಿದ ಆದೇಶಗಳಿಂದ ಭಾರತದ ಪೌರರಿಗೆ ಸಾಂವಿಧಾನಿಕವಾಗಿ ನೀಡಿದ ಹಕ್ಕು, ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ‘ಎಕ್ಸ್’ ಸಂಸ್ಥೆಯು ಭಾರತದ ಕಾನೂನನ್ನು ಗೌರವಿಸುತ್ತದೆ. ಆದರೆ, ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಸೋಮವಾರ ತಿಳಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಕಲಂ 79(3) (ಬಿ) ಅಡಿಯಲ್ಲಿ ಸಹಯೋಗ್ ಪೋರ್ಟಲ್ ಪ್ರಾರಂಭಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ‘ಎಕ್ಸ್ ಕಾರ್ಪ್’ನ (ಈ ಹಿಂದಿನ ಟ್ವಿಟರ್) ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು.
‘ಸಂವಿಧಾನದ 19ನೇ ವಿಧಿ ವಿಶಾಲವಾದ ಅರ್ಥವನ್ನು ಹೊಂದಿದೆ. ಇದರ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತದ ನಾಗರಿಕರಿಗೆ ಮಾತ್ರ ಲಭ್ಯವಾಗಿದೆ. ಆದರೆ, ಇದೇ ವಿಧಿಯ ಅಡಿಯಲ್ಲಿ ಒಂದು ಸಂಸ್ಥೆಯಾಗಿರುವ ‘ಎಕ್ಸ್ ಕಾರ್ಪ್’ಗೆ ಈ ಅಧಿಕಾರ ದೊರಕುವುದಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.