ADVERTISEMENT

ಮಾಲಿನ್ಯ ಹೆಚ್ಚಳ: ಯಮುನಾ ನದಿಯ ಹಲವು ಭಾಗಗಳಲ್ಲಿ ಮೀನುಗಾರಿಕೆ ನಿಷೇಧ

ಪಿಟಿಐ
Published 30 ಜೂನ್ 2021, 6:07 IST
Last Updated 30 ಜೂನ್ 2021, 6:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯಮುನಾ ನದಿಯಲ್ಲಿ ಮಾಲಿನ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ ನದಿಯ ಹಲವು ಭಾಗಗಳಲ್ಲಿ ಮೀನುಗಾರಿಕೆಯನ್ನು ನಡೆಸದಂತೆ ದೆಹಲಿ ಸರ್ಕಾರವು ಮಂಗಳವಾರ ನಿಷೇಧ ವಿಧಿಸಿದೆ.

ನದಿಯ ಮೇಲ್ಮೈಯಲ್ಲಿ ತೇಲುತ್ತಿರುವ ವಿಷಕಾರಿ ನೊರೆಯ ವಿಡಿಯೊ ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ನದಿಯಲ್ಲಿನ ಮಾಲಿನ್ಯಕ್ಕೆ ಸಾಬೂನು ಮತ್ತು ಡಿಟರ್ಜಂಟ್‌ಗಳು ಪ್ರಮುಖ ಕಾರಣ’ ಎಂದು ತಜ್ಞರು ಅಭಿ‍ಪ್ರಾಯಪಟ್ಟಿದ್ದಾರೆ.

ADVERTISEMENT

‘ಯಮುನಾ ನದಿಯಲ್ಲಿ ಮಾಲಿನ್ಯ ಮಟ್ಟವು ಹೆಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ನಿಬಂಧನೆಗಳನ್ನು ಹೊರಡಿಸಲಾಗಿದೆ. ಮುಂದಿನ ಆದೇಶ ಬರುವವರೆಗೆ ನದಿಯ ಎರಡೂ ಭಾಗಗಳಲ್ಲಿ ಮೀನುಗಾರಿಕೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂದು ದೆಹಲಿಯ ಪಶುಸಂಗೋಪನಾ ಇಲಾಖೆಯು ಅಧಿಸೂಚನೆ ಹೊರಡಿಸಿದೆ.

ನಿಯಮ ಉಲ್ಲಂಘಿಸಿದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

‘ಯಮುನಾ ನದಿಯಲ್ಲಿ ತೇಲುತ್ತಿರುವ ವಿಷಕಾರಿ ನೊರೆಗೆ ಪ್ರಮುಖ ಕಾರಣ ತ್ಯಾಜ್ಯ ನೀರು. ಬಣ್ಣದ ಕಾರ್ಖಾನೆಗಳು, ಮನೆಗಳು ಮತ್ತು ದೋಬಿ ಘಾಟ್‌ಗಳಲ್ಲಿ ಡಿಟರ್ಜೆಂಟ್‌ಗಳನ್ನು ಬಳಸಲಾಗುತ್ತದೆ. ಹಾಗಾಗಿ ಇಲ್ಲಿಂದ ಹೊರ ಬರುವ ತ್ಯಾಜ್ಯ ನೀರಿನಲ್ಲಿ ಫಾಸ್ಪೇಟ್‌ ಅಂಶ ಹೆಚ್ಚಿರುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.

ಯಮುನಾ ನದಿಯಲ್ಲಿ ಮಾಲಿನ್ಯವನ್ನು ತಡೆಗಟ್ಟಲು ದೆಹಲಿ ಸರ್ಕಾರವು ಇತ್ತೀಚೆಗೆ ಬ್ಯೂರೋ ಆಫ್‌ ಇಂಡಿಯಾ ಸ್ಟ್ಯಾಂಡರ್ಡ್ಸ್‌ ಮಾನದಂಡಗಳಿಗೆ ಅನುಗುಣವಾಗಿರದ ಸಾಬೂನುಗಳ ಮಾರಾಟ ಮತ್ತು ಶೇಖರಣೆಯನ್ನು ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.