ನವದೆಹಲಿ: ದೆಹಲಿಯ ಹಲವು ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ ಮಳೆ ಸುರಿಯಿತು. ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
ಯಮುನಾ ನದಿ ನೀರಿನ ಮಟ್ಟವು ನಿರಂತರವಾಗಿ ಹೆಚ್ಚಾಗುತ್ತಿದೆ. ಮಂಗಳವಾರ ಸಂಜೆ ವೇಳೆಗೆ ನೀರಿನ ಮಟ್ಟವು 206 ಮೀಟರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. ನದಿ ತಟದಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ದೆಹಲಿಯ 6 ಜಿಲ್ಲೆಗಳ ಸುಮಾರು 15,000 ಜನರು ತಗ್ಗು ಪ್ರದೇಶಗಳಲ್ಲಿ ವಾಸವಿದ್ದಾರೆ. 5,000 ಜನರು ಪ್ರವಾಹ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ನದಿ ತಟದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಬೇಕು ಮತ್ತು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಭೂಕುಸಿತ– ಇಬ್ಬರು ಸಾವು: ಇಲ್ಲಿನ ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ, ಸೋಮವಾರ ಮುಂಜಾನೆ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮುಂಕಟಿಯಾದಲ್ಲಿ, ಚಲಿಸುತ್ತಿದ್ದ ವಾಹನದ ಮೇಲೆ ಭೂಕುಸಿತ ಸಂಭವಿಸಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ರಾಜ್ಯದಲ್ಲಿ ಭಾನುವಾರ ಇಬ್ಬರು ಸಾವಿಗೀಡಾಗಿದ್ದಾರೆ.
ಭೂಕುಸಿತ: ಬಾಲಕಿ ಸೇರಿ ಮೂವರು
ಸಾವು ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭಾರಿ ಮಳೆ ಮುಂದುವರಿದಿದೆ. ಎರಡು ಪ್ರತ್ಯೇಕ ಭೂಕುಸಿತ ಘಟನೆಗಳಲ್ಲಿ 10 ವರ್ಷದ ಬಾಲಕಿ ಸೇರಿದಂತೆ ಮೂವರು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಶಿಮ್ಲಾದ ಹೊರವಲಯದಲ್ಲಿರುವ ಜುಂಗಾ ಪ್ರದೇಶದ ಡುಬ್ಲೂದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 35 ವರ್ಷದ ವೀರೇಂದರ್ ಕುಮಾರ್ ಹಾಗೂ ಅವರ 10 ವರ್ಷದ ಮಗಳು ಸಾವಿಗೀಡಾಗಿದ್ದಾರೆ. ಮನೆಯ ಹೊರಗಿದ್ದ ವೀರೇಂದರ್ ಅವರ ಪತ್ನಿ ಬದುಕುಳಿದಿದ್ದಾರೆ. ಮತ್ತೊಂದು ಘಟನೆಯಲ್ಲಿ ಶಿಮ್ಲಾದ ಕೋಟ್‌ಖೈ ಪ್ರದೇಶದ ಚೋಲ್ ಗ್ರಾಮದಲ್ಲಿ ಮನೆಯೊಂದು ಕುಸಿದು ಅದರಲ್ಲಿದ್ದ ಕಲಾವತಿ ಎಂಬ ವೃದ್ಧೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ.
ಪಂಜಾಬ್: ಪ್ರವಾಹದಲ್ಲಿ 29 ಮಂದಿ ಸಾವು
ಚಂಡೀಗಢ (ಪಿಟಿಐ): ಪಂಜಾಬ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹದಲ್ಲಿ ಈವರೆಗೆ 29 ಜನರು ಮೃತಪಟ್ಟಿದ್ದಾರೆ. ರಾಜ್ಯದ 256107 ಮಂದಿ ಪ್ರವಾಹ ಪೀಡಿತರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು. ಲೂಧಿಯಾನಾದಲ್ಲಿ ಅತಿ ಹೆಚ್ಚು 216.70 ಮಿ.ಮೀ ಮಳೆ ದಾಖಲಾಗಿದೆ. ರಾಜ್ಯ ಸರ್ಕಾರವು ಸೆ.3ರವರೆಗೆ ಎಲ್ಲಾ ಶಾಲೆ ಮತ್ತು ಕಾಲೇಜುಗಳನ್ನು ಬಂದ್ ಮಾಡಿ ಆದೇಶಿಸಿದೆ. ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರಗಳಲ್ಲಿ ಸತಲುಜ್ ಬಿಯಾಸ್ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ಪಂಜಾಬ್ ಪ್ರವಾಹವನ್ನು ಎದುರಿಸುತ್ತಿದೆ. ಪಠಾಣಕೋಟ್ ಜಿಲ್ಲೆಯಲ್ಲಿ ಅತಿ ಹೆಚ್ಚು 2.56 ಲಕ್ಷ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು ಇಲ್ಲಿ ಮೂವರು ಕಾಣೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.