ADVERTISEMENT

ದೆಹಲಿ: ಅಪಾಯದ ಮಟ್ಟ ಮೀರಿದ ಯಮುನಾ

ತಗ್ಗು ಪ್ರದೇಶದಲ್ಲಿನ ಜನರನ್ನು ತೆರವುಗೊಳಿಸಲು ಕಾರ್ಯತಂತ್ರ

ಪಿಟಿಐ
Published 12 ಆಗಸ್ಟ್ 2022, 14:33 IST
Last Updated 12 ಆಗಸ್ಟ್ 2022, 14:33 IST
ದೆಹಲಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಶುಕ್ರವಾರ ಯಮುನಾ ನದಿಯು ಅಪಾಯದ ಮಟ್ಟ ಮೀರಿದ್ದು, ನದಿಯಲ್ಲಿರುವ ಮಂದಿರವೊಂದು ಮುಳುಗುವ ಹಂತ ತಲುಪಿದೆ –ಪಿಟಿಐ ಚಿತ್ರ
ದೆಹಲಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಶುಕ್ರವಾರ ಯಮುನಾ ನದಿಯು ಅಪಾಯದ ಮಟ್ಟ ಮೀರಿದ್ದು, ನದಿಯಲ್ಲಿರುವ ಮಂದಿರವೊಂದು ಮುಳುಗುವ ಹಂತ ತಲುಪಿದೆ –ಪಿಟಿಐ ಚಿತ್ರ   

ನವದೆಹಲಿ: ದೆಹಲಿಯಲ್ಲಿನ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಯಮುನಾ ನದಿಯು 205.33 ಮೀಟರ್ ಅಪಾಯದ ಮಟ್ಟ ತಲುಪಿದೆ. ತಗ್ಗು ಪ್ರದೇಶಗಳಲ್ಲಿರುವ ನಿವಾಸಿಗಳನ್ನು ತೆರವುಗೊಳಿಸಲು ಆಡಳಿತವು ಕಾರ್ಯತಂತ್ರ ರೂಪಿಸಿದೆ.

ಯಮುನಾ ನದಿಯ ನೀರಿನ ಮಟ್ಟವು ಶುಕ್ರವಾರ ಸಂಜೆ 4ರ ವೇಳೆಗೆ 205.38 ಮೀಟರ್ ಮಟ್ಟಕ್ಕೆ ತಲುಪಿದೆ ಎಂದು ದೆಹಲಿ ಪ್ರವಾಹ ನಿಯಂತ್ರಣ ಕೊಠಡಿಯು ಮಾಹಿತಿ ನೀಡಿದೆ.

ಹಳೆಯ ರೈಲ್ವೆ ನಿಲ್ದಾಣದ ಸೇತುವೆಯ ಬಳಿ ಶುಕ್ರವಾರ ಬೆಳಿಗ್ಗೆ 8ರ ವೇಳೆಗೆ ನೀರಿನ ಮಟ್ಟವು 203.86 ಮೀಟರ್‌ನಿಂದ ಮಧ್ಯಾಹ್ನ 3ರ ವೇಳೆಗೆ 205.29 ಮೀಟರ್ ತಲುಪಿತ್ತು.

ADVERTISEMENT

ಹರಿಯಾಣದ ಯಮುನಾ ನಗರದಲ್ಲಿರುವ ಹಾಥಿಕುಂಡ್ ಬ್ಯಾರೇಜ್‌ನಿಂದ ನೀರು ಹೊರ ಬಿಡುವ ಪ್ರಮಾಣವು 1 ಲಕ್ಷ ಕ್ಯೂಸೆಕ್ಸ್‌ ಗಡಿ ದಾಟಿದ್ದು, ದೆಹಲಿಯಲ್ಲಿ ಪ್ರವಾಹದ ಎಚ್ಚರಿಕೆಯನ್ನು ಘೋಷಿಸಲಾಗಿದೆ. ಪ್ರವಾಹ ಪೀಡಿತ ಸ್ಥಳಗಳಲ್ಲಿರುವ ಜನರನ್ನು ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರಿಸಲು 34 ದೋಣಿಗಳು ಮತ್ತು ಮೊಬೈಲ್ ಪಂಪ್‌ಗಳನ್ನು ನಿಯೋಜಿಸಲಾಗಿದೆ. ಪ್ರವಾಹ ಪೀಡಿತ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 37 ಸಾವಿರ ಮಂದಿಯನ್ನು ಸ್ಥಳಾಂತರಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಂವಹನ ನಡೆಸಲಾಗಿದೆ’ ಎಂದು ಪೂರ್ವದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಲ್ ಬಂಕಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.