
ನವದೆಹಲಿ: ಭಯೋತ್ಪಾದನಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
ಮೂತ್ರಪಿಂಡ ಹಾಗೂ ಹೃದಯಕ್ಕೆ ಸಂಬಂಧಿಸಿದ ಗಂಭೀರ ರೋಗಗಳಿಂದ ತಾನು ಬಳಲುತ್ತಿದ್ದು, ಚಿಕಿತ್ಸೆ ನೀಡಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಯಾಸಿನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.
‘ಅರ್ಜಿದಾರರು 2017ರ ವೈದ್ಯಕೀಯ ದಾಖಲೆಗಳನ್ನು ಲಗತ್ತಿಸಿದ್ದಾರೆ. ತಿಹಾರ್ ಜೈಲಿನ ವರದಿಯ ಪ್ರಕಾರ ಯಾಸಿನ್ ಯಾವುದೇ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವಂತೆ ಕಾಣುತ್ತಿಲ್ಲ. ಆತನಿಗೆ ನೀಡಬೇಕಾದ ವೈದ್ಯಕೀಯ ಚಿಕಿತ್ಸೆಯು ಜೈಲಿನಲ್ಲಿ ಲಭ್ಯವಿಲ್ಲದೇ ಇದ್ದಲ್ಲಿ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಬೇಕು’ ಎಂದು ನ್ಯಾಯಧೀಶ ನೀನಾ ಬನ್ಸಾಲ್ ಕೃಷ್ಣ ಹೇಳಿದರು.
ವೈದ್ಯಕೀಯ ಆರೈಕೆ ಕೋರಿ ಯಾಸಿನ್ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಜಾಗೊಳಿಸಿತು.
ವಿವಿಧ ಅಪರಾಧಗಳಲ್ಲಿ ಯಾಸಿನ್‌ನನ್ನು ತಪ್ಪಿತಸ್ಥನೆಂದು ಪರಿಗಣಿಸಿ ದೆಹಲಿಯ ವಿಚಾರಣಾಧೀನ ನ್ಯಾಯಾಲಯವು 2022ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.