ADVERTISEMENT

ಸುಧಾಕರ್‌ ಮುನಿಸು, ಯತ್ನಾಳ ಆಕ್ರೋಶ

ಶಾಸಕಾಂಗ ಪಕ್ಷದ ಸಭೆ ಕರೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 20:13 IST
Last Updated 10 ಫೆಬ್ರುವರಿ 2020, 20:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಖಾತೆ ಹಂಚಿಕೆಯ ಬಗ್ಗೆ ಭಾರಿ ಪ್ರಮಾಣದಲ್ಲಿ ಅಸಮಾಧಾನ ವ್ಯಕ್ತವಾಗದಿದ್ದರೂ, ಡಾ.ಕೆ.ಸುಧಾಕರ್‌ ಆರಂಭದಲ್ಲಿ ಖಾತೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಬಳಿಕ ಕೊಟ್ಟ ಖಾತೆಯನ್ನೇ ನಿಭಾಯಿಸುತ್ತೇನೆ ಎಂದಿದ್ದಾರೆ.

‘ನಾನು ಅಂದುಕೊಂಡ ಖಾತೆ ಸಿಗಲಿಲ್ಲ’ ಎಂದು ಹೇಳಿದ ಸುಧಾಕರ್‌ ಅವರು, ಅರಣ್ಯ ಅಥವಾ ಇಂಧನ ಖಾತೆಯನ್ನು ಬಯಸಿದ್ದರು ಎನ್ನಲಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಂಪುಟದಲ್ಲಿ ಪ್ರಾದೇಶಿಕ ಅಸಮಾನತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿರುವ ಅವರು,‘ಸಚಿವ ಸಂಪುಟ ಎಂದರೆ ಕೇವಲ ಬೆಳಗಾವಿ, ಬೆಂಗಳೂರು ಎಂಬಂತಾಗಿದೆ. ಈ ಪ್ರಾದೇಶಿಕ ಅಸಮಾನತೆ ತೊಡೆದುಹಾಕಲು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ಹೇಳಿದರು.

ADVERTISEMENT

‘ಇತರ ಜಿಲ್ಲೆಗಳ ಶಾಸಕರ ಆಕಾಂಕ್ಷೆಗಳಿಗೂ ಮುಖ್ಯಮಂತ್ರಿ ಸ್ಪಂದಿಸಬೇಕು. ಮಹೇಶ ಕುಮಟಳ್ಳಿ ಅವರಿಗೆ ಏಕೆ ಸಚಿವ ಸ್ಥಾನ ನೀಡಿಲ್ಲ ಎಂಬುದು ಗೊತ್ತಾಗಬೇಕು. ಪ್ರಾದೇಶಿಕ ಅಸಮಾನತೆ, ಬಜೆಟ್‌ನಲ್ಲಿ ಹಣ ಮೀಸಲು ಇಡುವ ಬಗ್ಗೆ ಶಾಸಕರೊಂದಿಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದರು.

‘ಸಂಪುಟ ವಿಸ್ತರಣೆಯಿಂದ ಬಿಜೆಪಿ ಮೂಲ ಶಾಸಕರಲ್ಲಿ ಅಸಮಾಧಾನ ಉಂಟಾಗಿದೆ. ಇದನ್ನು ಹೋಗಲಾಡಿಸಲು ಸಭೆಯನ್ನು ಕರೆಯಬೇಕು’ ಎಂದು ಒತ್ತಾಯಿಸಿದರು.

ನನ್ನ ಯೋಗ್ಯತೆಗೆ ಸಿ.ಎಂ. ಸ್ಥಾನ ಸಿಗಬೇಕು:‘ನನ್ನ ಯೋಗ್ಯತೆಗೆ ಯಡಿಯೂರಪ್ಪ ಅವರಿರುವ ಮುಖ್ಯಮಂತ್ರಿ ಸ್ಥಾನ ಸಿಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ದೇವರ ಆಶೀರ್ವಾದ ಇದ್ದರೆ ಮುಂದೆ ನೋಡೋಣ’ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

ಹುಕ್ಕೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿಲ್ಲ. ಇದುವರೆಗೆ ನನ್ನ ಹೆಂಡ್ತಿ ಮೇಲೆಯೇ ಮುನಿಸಿಕೊಂಡಿಲ್ಲ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಏಕೆ ಮುನಿಸಿಕೊಳ್ಳಲಿ‘ ಎಂದರು.

‘ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ನನ್ನನ್ನು ಕೈಬಿಟ್ಟಿರಬಹುದು. ನನ್ನ ನಸೀಬಿನಲ್ಲಿ ಸಚಿವ ಸ್ಥಾನ ಇಲ್ಲ. ಹೀಗಾಗಿ ಸಿಕ್ಕಿಲ್ಲ. 13 ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಮುಂದೆ ಸಚಿವ ಸ್ಥಾನ ಸಿಕ್ಕಾಗ ನೋಡೋಣ’ ಎಂದು ನುಡಿದರು.

ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶ್ರೀಮಂತ ಪಾಟೀಲ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರಿಗೆ ನನಗಿಂತ ಹೆಚ್ಚು ಅನುಭವ ಇದೆ. ಅದಕ್ಕೆ ನೀಡಿರಬಹುದು’ ಎಂದು ಹೇಳಿದರು.

***

ಮುಖ್ಯಮಂತ್ರಿ ಆಗಬೇಕೆಂಬ ಆಸೆ ನನಗೂ ಇದೆ. ಆ ಹುದ್ದೆ ಕೊಟ್ಟರೂ ನಿಭಾಯಿಸುತ್ತೇನೆ. ಆದರೆ, ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ
-ಬಿ.ಸಿ.ಪಾಟೀಲ, ಅರಣ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.