ADVERTISEMENT

ಮೂಲ ಪ್ರತಿ ಇಲ್ಲದೆ 'ಯಡ್ಡಿ ಡೈರಿ' ಬಗ್ಗೆ ತನಿಖೆ ಅಸಾಧ್ಯ: ಸಿಬಿಡಿಟಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 16:49 IST
Last Updated 22 ಮಾರ್ಚ್ 2019, 16:49 IST
   

ನವದೆಹಲಿ: ಯಡ್ಡಿ ಡೈರಿ ಹಾಳೆಗಳನ್ನು ಪರೀಕ್ಷಿಸುವುದು ಅಸಾಧ್ಯ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿದೆ.ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್‌ ಜೇಟ್ಲಿ, ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಸೇರಿದಂತೆ ಬಿಜೆಪಿಯ ಹಲವು ಉನ್ನತ ನಾಯಕರಿಗೆ ಸುಮಾರು ₹1800 ಕೋಟಿ ಮೊತ್ತದಷ್ಟು ಹಣ ಪಾವತಿಸಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯನ್ನು ‘ದಿ ಕ್ಯಾರವಾನ್’ ನಿಯತಕಾಲಿಕೆ ಶುಕ್ರವಾರ ಪ್ರಕಟಿಸಿತ್ತು.

ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಸಿಬಿಡಿಟಿ, ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ.ಆದರೆ ಇದನ್ನು ಪರೀಕ್ಷಿಸಬೇಕಾದರೆ ಫಾರೆನ್ಸಿಕ್ ಲ್ಯಾಬ್‍ಗೆ ಮೂಲ ಪ್ರತಿಯ ಅಗತ್ಯವಿದೆ. ಇಲ್ಲಿರುವುದು ಫೋಟೋಕಾಪಿ ಎಂದು ಹೇಳಿದೆ.

ಯಡ್ಡಿ ಡೈರೀಸ್ ಎಂಬ ಸುದ್ದಿ ಪ್ರಕಟಿಸಿದ ದಿ ಕ್ಯಾರವಾನ್, ಆದಾಯ ತೆರಿಗೆ ಇಲಾಖೆಗೆ ಯಡಿಯೂರಪ್ಪ ಅವರ ಡೈರಿ ಸಿಕ್ಕಿದ್ದು ಕಾಂಗ್ರೆಸ್‌ನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ. ನಾವು (ಕ್ಯಾರವಾನ್ ವರದಿಗಾರರು) ಈ ಡೈರಿಯ ಹಾಳೆಗಳನ್ನು ಡಿ.ಕೆ.ಶಿವಕುಮಾರ್ ಅವರಿಗೆ ತೋರಿಸಿದೆವು. ಅವರು ‘ಈ ಪುಟಗಳನ್ನು ನನ್ನ ಮನೆಯಿಂದ ಆಗಸ್ಟ್ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು’ ಎಂದು ಒಪ್ಪಿಕೊಂಡರು. ಆದರೆ ಹೆಚ್ಚೇನೂ ಮಾತನಾಡಲಿಲ್ಲ’ ಎಂದು ಹೇಳಿದೆ.

ADVERTISEMENT

ವರದಿ ಪ್ರಕಾರ, ಈ ದಾಖಲೆಗಳನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಕಳಿಸಲಾಗಿತ್ತು. ಆದರೆ ಯಡಿಯೂರಪ್ಪ ಅವರಿಂದ ₹150 ಕೋಟಿ ಪಡೆದಿದ್ದರೆನ್ನಲಾಗಿದ್ದ ಜೇಟ್ಲಿ, ಈ ಬಗ್ಗೆ ಮೌನ ವಹಿಸಿದ್ದರು.

ತಮ್ಮ ಮೇಲಿರುವ ಆರೋಪ ನಿರಾಕರಿಸಿದ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಬೌದ್ಧಿಕ ದಿವಾಳಿತನಕ್ಕೊಳಗಾಗಿದ್ದಾರೆ.ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಕಂಡು ಅವರು ಹತಾಶರಾಗಿದ್ದಾರೆ. ಅವರು ಆರಂಭವಾಗುವ ಮೊದಲೇ ಯುದ್ಧ ಸೋತಿದ್ದಾರೆ. ಲಭ್ಯವಾಗಿರುವ ದಾಖಲೆಗಳು ನಕಲಿ ಮತ್ತು ಸುಳ್ಳು ಎಂಬುದನ್ನು ಐಟಿ ಅಧಿಕಾರಿಗಳು ಈಗಾಗಲೇ ಸಾಬೀತುಪಡಿಸಿದ್ದಾರೆ’ ಎಂದು ಟ್ವೀಟಿಸಿದ್ದಾರೆ.

ಈ ದಾಖಲೆಗಳ ಮೂಲ ಪ್ರತಿಯನ್ನು ಪಡೆಯುವುದಕ್ಕಾಗಿ ಆದಾಯ ತೆರಿಗೆ ಕಚೇರಿ ಎಲ್ಲ ರೀತಿಯ ಪ್ರಯತ್ನ ಮಾಡಿದೆ.ಆದಾಗ್ಯೂ, ಆ ಸ್ಥಳದ ಮಾಹಿತಿ ಮತ್ತು ಮೂಲ ಪ್ರತಿಗಳು ಇದ್ದರೆ ಅವು ಎಲ್ಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸಿಬಿಡಿಟಿ ಹೇಳಿದೆ.

ದಿ ಕ್ಯಾರವಾನ್ ಪ್ರಕಟಿಸಿರುವ ಹಾಳೆಗಳು, ಕರ್ನಾಟಕ ಶಾಸಕರ ಡೈರಿಯ ಹಾಳೆಗಳಾಗಿವೆ.2017 ಆಗಸ್ಟ್ ನಲ್ಲಿ ದಾಳಿ ನಡೆದಾಗ ಶಿವಕುಮಾರ್ ಅದನ್ನು ಕೊಟ್ಟಿದ್ದರು. ನವೆಂಬರ್ 25, 2017ರಲ್ಲಿ ಈ ಬಗ್ಗೆ ಯಡಿಯೂರಪ್ಪ ಅವರನ್ನು ಪ್ರಶ್ನಿಸಲಾಗಿತ್ತು. ಆಗ ಅವರು ತನಗೆ ಡೈರಿ ಬರೆದಿಡುವ ಅಭ್ಯಾಸ ಅಲ್ಲ ಮತ್ತು ಹಾಳೆಯಲ್ಲಿರುವುದು ತನ್ನ ಕೈಬರಹ ಅಲ್ಲ.ಅಲ್ಲಿರುವ ಬರಹ ಮತ್ತು ಹಸ್ತಾಕ್ಷರ ತನ್ನದಲ್ಲ ಎಂದು ಯಡಿಯೂರಪ್ಪ ಹೇಳಿದ್ದರು.

5 ತಿಂಗಳ ನಂತರ ಏಪ್ರಿಲ್ 2018ರಲ್ಲಿ ಇದರ ತನಿಖೆಗಾಗಿ ತನಿಖಾ ತಂಡ ಕೇಂದ್ರ ಫಾರೆನ್ಸಿಕ್ ಸಯನ್ಸ್ ಲ್ಯಾಬೊರೇಟರಿ (ಸಿಎಫ್‌ಎಸ್‍ಎಲ್) ಹೈದರಾಬಾದ್‍ನ್ನು ಸಂಪರ್ಕಿಸಿತ್ತು. 10 ದಿನಗಳ ನಂತರ ಉತ್ತರಿಸಿದ ಫಾರೆನ್ಸಿಕ್ ಲ್ಯಾಬ್, ಆ ವಿವಾದಾತ್ಮಕ ದಾಖಲೆಗಳ ಮೂಲ ಪ್ರತಿ ಸಿಕ್ಕಿದರೆ ಮಾತ್ರ ಅದನ್ನು ಪರೀಕ್ಷಿಸಬಹುದು ಎಂದು ಹೇಳಿತ್ತು.

ಈ ದಾಖಲೆಗಳ ಸತ್ಯಾಸತ್ಯತೆ ಪರೀಕ್ಷಿಸಬೇಕಾದರೆ ಮೂಲ ಪ್ರತಿ ಬೇಕು ಎಂದು ಫಾರೆನ್ಸಿಕ್ ಲ್ಯಾಬ್ ಹೇಳಿರುವುದನ್ನು ಸಿಬಿಡಿಟಿ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಇದರ ಮೂಲ ಪ್ರತಿ ಸಿಗದೇ ಇರುವ ಕಾರಣ ಈ ದಾಖಲೆಗಳು ಮೇಲ್ನೋಟಕ್ಕೆ ಸಂದೇಹಾಸ್ಪದ ರೀತಿಯಲ್ಲಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.