ADVERTISEMENT

ಯೆಸ್‌ ಬ್ಯಾಂಕ್ ಹಗರಣ: ₹127 ಕೋಟಿ ಮೌಲ್ಯದ ರಾಣಾ ಕಪೂರ್‌ ಫ್ಲ್ಯಾಟ್ ಜಪ್ತಿ

ಪಿಟಿಐ
Published 25 ಸೆಪ್ಟೆಂಬರ್ 2020, 12:34 IST
Last Updated 25 ಸೆಪ್ಟೆಂಬರ್ 2020, 12:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಕ್ರಮ ಹಣ ವರ್ಗಾವಣೆ ತನಿಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ನಲ್ಲಿ ಯೆಸ್‌ ಬ್ಯಾಂಕ್‌ ಸಹ ಸಂಸ್ಥಾಪಕ ರಾಣಾ ಕಪೂರ್ ಅವರ ₹ 127 ಕೋಟಿಯ ಫ್ಲ್ಯಾಟ್‌ನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ ಎಂದು ಕೇಂದ್ರ ಸಂಸ್ಥೆ ಶುಕ್ರವಾರ ತಿಳಿಸಿದೆ.

ಲಂಡನ್‌ನ 77 ಸೌತ್ ಆಡ್ಲಿ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ 1ರ ಆಸ್ತಿಯನ್ನು ಜಪ್ತಿ ಮಾಡುವಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ತಾತ್ಕಾಲಿಕ ಆದೇಶವನ್ನು ಹೊರಡಿಸಿತ್ತು.

ಫ್ಲ್ಯಾಟ್‌ನ ಮಾರುಕಟ್ಟೆ ಮೌಲ್ಯ 13.5 ಮಿಲಿಯನ್ ಪೌಂಡ್ (ಸುಮಾರು ₹ 127 ಕೋಟಿ) ಆಗಿದೆ. ಈ ಆಸ್ತಿಯನ್ನು ರಾಣಾ ಕಪೂರ್ ಅವರು 2017ರಲ್ಲಿ 9.9 ಮಿಲಿಯನ್ ಪೌಂಡ್ (₹ 93 ಕೋಟಿ) ನೀಡಿ ಡಿಒಐಟಿ ಕ್ರಿಯೇಷನ್ಸ್ ಜರ್ಸಿ ಲಿಮಿಟೆಡ್ ಹೆಸರಿನಲ್ಲಿ ಖರೀದಿಸಿದ್ದರು ಮತ್ತು ಅವರೇ ಅದರ ಮಾಲೀಕರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

'ಕಪೂರ್ ಲಂಡನ್‌ನಲ್ಲಿರುವ ಈ ಆಸ್ತಿಯನ್ನು ಬೇರೆಯವರಿಗೆ ಮಾರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದಕ್ಕಾಗಿ ಅವರು ಹೆಸರಾಂತ ಆಸ್ತಿ ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ' ಎಂದು ವಿಶ್ವಾಸಾರ್ಹ ಮೂಲದಿಂದ ಸಂಸ್ಥೆಗೆ ಮಾಹಿತಿ ಲಭ್ಯವಾಗಿತ್ತು ಎಂದು ಅದು ಹೇಳಿದೆ.

ಈ ಕುರಿತು ವಿಚಾರಣೆ ನಡೆಸಿದಾಗ ಈ ಆಸ್ತಿಯನ್ನು ಮಾರಾಟ ಮಾಡಲು ಹಲವಾರು ವೆಬ್‌ಸೈಟ್‌ಗಳಲ್ಲಿ ಪಟ್ಟಿಮಾಡಲಾಗಿದೆ ಎಂಬುದು ದೃಢಪಟ್ಟಿದೆ.

ಜಪ್ತಿ ಆದೇಶವನ್ನು ಪೂರ್ಣಗೊಳಿಸಲು ನಿಯಮಾವಳಿಗಳ ಪ್ರಕಾರ, ಇ.ಡಿ ಇದೀಗ ಲಂಡನ್‌ನಲ್ಲಿರುವ ತಮ್ಮ ಸಹವರ್ತಿಗಳನ್ನು ಸಂಪರ್ಕಿಸುತ್ತದೆ ಮತ್ತು ಪಿಎಂಎಲ್‌ಎನ ಅಪರಾಧ ವಿಭಾಗಗಳ ಅಡಿಯಲ್ಲಿ ಜಪ್ತಿ ಮಾಡಲು ತೀರ್ಮಾನಿಸಿರುವುದರಿಂದ ಈ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಸಾಧ್ಯವಿಲ್ಲ ಎಂಬ ಘೋಷಣೆಯನ್ನು ಹೊರಡಿಸುತ್ತದೆ.

ಇದಕ್ಕೂ ಮೊದಲು, ಪಿಡಿಎಂಎ ಅಡಿಯಲ್ಲಿ ಇತರ ತನಿಖೆಗಳ ಭಾಗವಾಗಿ ಇ.ಡಿ ಈ ಹಿಂದೆ ಅಮೆರಿಕ, ದುಬೈ ಮತ್ತು ಆಸ್ಟ್ರೇಲಿಯಾದಲ್ಲಿರುವ ಆಸ್ತಿಗಳನ್ನು ಜಪ್ತಿ ಮಾಡಿತ್ತು.

ಕಪೂರ್, ಅವರ ಕುಟುಂಬ ಸದಸ್ಯರು ಮತ್ತು ಇತರರ ಮೇಲೆ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕಾನೂನಿನ ಉಲ್ಲಂಘನೆ ಮತ್ತು ಕಪೂರ್‌ಗೆ ನೀಡಲಾದ ಉದ್ದೇಶಿತ ಕಿಕ್‌ಬ್ಯಾಕ್‌ಗಳಿಗೆ ಬದಲಾಗಿ ಯೆಸ್ ಬ್ಯಾಂಕ್ ವಿವಿಧ ಘಟಕಗಳಿಗೆ ಸಂಶಯಾಸ್ಪದ ಬಹು ಕೋಟಿ ಸಾಲಗಳನ್ನು ನೀಡಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.