ADVERTISEMENT

ಅತ್ಯಾಚಾರಿಗಳ ವಿರುದ್ಧ ಎನ್‌ಎಸ್‌ಎ ಅಡಿ ಕ್ರಮಕ್ಕೆ ಸಿಎಂ ಯೋಗಿ ಆದಿತ್ಯನಾಥ ಸೂಚನೆ

ಪಿಟಿಐ
Published 28 ಆಗಸ್ಟ್ 2020, 6:31 IST
Last Updated 28 ಆಗಸ್ಟ್ 2020, 6:31 IST
ಯೋಗಿ ಆದಿತ್ಯನಾಥ (ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ (ಸಂಗ್ರಹ ಚಿತ್ರ)   

ಲಖನೌ: ಉತ್ತರ ಪ್ರದೇಶದ ಲಖೀಮಪುರ್ ಖೀರಿ ಜಿಲ್ಲೆಯ ಇಸಾನಗರದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ)ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

‘ಅಪರಾಧದಲ್ಲಿ ಶಾಮೀಲಾಗಿರುವವರ ವಿರುದ್ಧ ಎನ್‌ಎಸ್‌ಎ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ’ ಎಂದು ಸರ್ಕಾರದ ಅಧಿಕೃತ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.

ಸಂತ್ರಸ್ತೆಯ ಕುಟುಂಬದವರಿಗೆ ₹ 5 ಲಕ್ಷ ಪರಿಹಾರವನ್ನೂ ಘೋಷಿಸಿರುವ ಯೋಗಿ ಅವರು, ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ಕೊಡಿಸುವುದಾಗಿಯೂ ಭರವಸೆ ನೀಡಿದ್ದಾರೆ.

ADVERTISEMENT

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಿಚಿತರು ಆಕೆಯನ್ನು ಹತ್ಯೆ ಮಾಡಿದ್ದರು. ನೀಮ್‌ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬರುವ ಗ್ರಾಮದ ಹೊಲವೊಂದರಲ್ಲಿ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಬಾಲಕಿಯು ವಿದ್ಯಾರ್ಥಿವೇತನ ಅರ್ಜಿ ತುಂಬುವುದಕ್ಕೆಂದು ಮನೆಯಿಂದ ತೆರಳಿದ್ದಾಗ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದರು. ಅತ್ಯಾಚಾರ ಎಸಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.

ಈ ಮಧ್ಯೆ ಘಟನೆಗೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸ್ ಮುಖ್ಯಸ್ಥರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಗುರುವಾರ ನೋಟಿಸ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.