ADVERTISEMENT

ವಾರಾಣಸಿಯಲ್ಲಿ ಯಾವುದೇ ದೇಗುಲ ಕೆಡವಿಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

ಪಿಟಿಐ
Published 17 ಜನವರಿ 2026, 14:42 IST
Last Updated 17 ಜನವರಿ 2026, 14:42 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ: ‘ವಾರಾಣಸಿಯಲ್ಲಿ (ಕಾಶಿ) ಯಾವುದೇ ದೇಗುಲವನ್ನು ಕೆಡವಿಲ್ಲ’ ಎಂದು ಸ್ಪಷ್ಟಪಡಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಜನರ ಭಾವನೆಗಳನ್ನು ಕೆರಳಿಸಲು ಕೃತಕ ಬುದ್ಧಿಮತ್ತೆಯಿಂದ(ಎಐ) ಸೃಷ್ಟಿಸಿರುವ ವಿಡಿಯೊಗಳನ್ನು ಬಳಸಲಾಗುತ್ತಿದೆ’ ಎಂದು ಆರೋಪಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಐ ವಿಡಿಯೊಗಳ ಮೂಲಕ ತಪ್ಪು ಮಾಹಿತಿ ಹಂಚಲಾಗುತ್ತಿದೆ. ದೇವಾಲಯವನ್ನು ಧ್ವಂಸಗೊಳಿಸಿರುವಂತೆ ಸೃಷ್ಟಿಸಿರುವ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರಿಂದ, ಇದು ವದಂತಿ ಎಂದು ಹೇಳಲು ನಾನು ವಾರಾಣಸಿಗೆ ಬರಬೇಕಾಯಿತು’ ಎಂದು ಹೇಳಿದರು.

‘ದೇವಾಲಯಗಳನ್ನು ಕೆಡವಲಾಗಿದೆ ಎಂಬುದಕ್ಕಿಂತ ದೊಡ್ಡ ಸುಳ್ಳು ಇನ್ನೊಂದಿಲ್ಲ. ದೇವಾಲಯವನ್ನು ಕೆಡವಿಲ್ಲ. ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನು ಸಂರಕ್ಷಿಸಲಾಗಿದೆ. ಆದರೆ, ಕಾಂಗ್ರೆಸ್ ತಪ್ಪು ಮಾಹಿತಿಯ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ’ ಎಂದು ದೂರಿದರು.

ADVERTISEMENT

‘ಕಾಶಿಯ ಪರಂಪರೆಯನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ. ದೇಶದ ನಂಬಿಕೆಯನ್ನು ಕೀಳಾಗಿ ಕಾಣಲು ಕಾಂಗ್ರೆಸ್ ಯತ್ನಿಸುತ್ತದೆ. ಮಠಗಳು ಮತ್ತು ದೇವಾಲಯಗಳ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಹಾಗೂ ಮಾತಾ ಅಹಲ್ಯಾಬಾಯಿ ಅವರ ಪರಂಪರೆಯನ್ನು ದೂಷಿಸುವ ಮೂಲಕ ಜನರನ್ನು ದಾರಿ ತಪ್ಪಿಸಲು ಮುಂದಾಗಿದೆ’ ಎಂದು ಅವರು ಆರೋಪಿಸಿದರು.

‘ಕಾಂಗ್ರೆಸ್ ಎಂದಿಗೂ ಭಾರತದ ಪರಂಪರೆಯನ್ನು ಗೌರವಿಸಲಿಲ್ಲ, ಕಾಶಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಲಿಲ್ಲ. ಈಗ ಕಾಶಿ ಮತ್ತು ಇತರ ನಗರಗಳು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ, ಅದಕ್ಕೆ ತಡೆಯೊಡ್ಡುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ಹೇಳಿದರು.

‘ಮಣಿಕರ್ಣಿಕಾ ಘಾಟ್‌ನ ನವೀಕರಣ ಕಾರ್ಯವನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ(ಸಿಎಸ್‌ಆರ್‌) ಕೈಗೊಳ್ಳಲಾಗುತ್ತಿದ್ದು, ಅಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಆಚರಣೆಗಳನ್ನು ನಡೆಸಬಹುದು’ ಎಂದು ಆದಿತ್ಯನಾಥ್ ವಿವರಿಸಿದರು.

ಶನಿವಾರ ವಾರಾಣಸಿಗೆ ಆಗಮಿಸಿದ ಯೋಗಿ ಆದಿತ್ಯನಾಥ್ ಅವರು ಮೊದಲು ಕಾಶಿ ವಿಶ್ವನಾಥ ಮತ್ತು ಭೈರವನಾಥ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಆದರೆ, ವಿವಾದ ಸೃಷ್ಟಿಯಾಗಿದ್ದ ಮಣಿಕರ್ಣಿಕಾ ಘಾಟ್‌ಗೆ ಭೇಟಿ ನೀಡಲಿಲ್ಲ. ಮೊದಲು, ಅವರು ಘಾಟ್‌ಗೆ ಭೇಟಿ ನೀಡಬಹುದೆಂದು ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಈ ಭೇಟಿಯನ್ನು ರದ್ದುಗೊಳಿಸಲಾಯಿತು.

ಮಣಿಕರ್ಣಿಕಾ ಘಾಟ್ ನಿರ್ಮಿಸಿದ ಇಂದೋರ್‌ನ ರಾಣಿ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆ ಹಾನಿಗೊಳಗಾಗಿರುವಂತೆ ತೋರಿಸುವ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು. ಇದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ‘ನವೀಕರಣದ ನೆಪದಲ್ಲಿ ರಾಜ್ಯ ಸರ್ಕಾರ ಕಾಶಿಯ ಪರಂಪರೆಯನ್ನು ಹಾಳುಮಾಡುತ್ತಿದೆ’ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ ಅಜಯ್ ರೈ ಆರೋಪಿಸಿದ್ದರು.

ಜಿಲ್ಲಾಡಳಿತವು ಈ ಆರೋಪವನ್ನು ನಿರಾಕರಿಸಿದ್ದಲ್ಲದೇ, ಮಣಿಕರ್ಣಿಕಾ ಘಾಟ್ ಅನ್ನು ನವೀಕರಿಸಲಾಗುತ್ತಿದೆ. ಅಲ್ಲಿರುವ ಎಲ್ಲಾ ವಿಗ್ರಹಗಳು, ಪ್ರತಿಮೆಗಳನ್ನು ಸಂರಕ್ಷಿಸಲಾಗುತ್ತಿದೆ. ನವೀಕರಣದ ನಂತರ ಅವುಗಳನ್ನು ಮರುಸ್ಥಾಪಿಸಲಾಗುವುದು’ ಎಂದು ಸ್ಪಷ್ಟಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.