ADVERTISEMENT

ಕಾವಡ್‌ ಯಾತ್ರಿಗಳ ಟೀಕೆ: ಮುಖ್ಯಮಂತ್ರಿ ಯೋಗಿ ಕಿಡಿ

ಕೆಲವು ಮಾಧ್ಯಮಗಳಲ್ಲಿ ಪರಂಪರೆಯ ಅವಹೇಳನ

ಪಿಟಿಐ
Published 18 ಜುಲೈ 2025, 15:47 IST
Last Updated 18 ಜುಲೈ 2025, 15:47 IST
ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆಗಾಗಿ ವಾರಾಣಸಿಗೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ   ಪಿಟಿಐ ಚಿತ್ರ
ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆಗಾಗಿ ವಾರಾಣಸಿಗೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ   ಪಿಟಿಐ ಚಿತ್ರ   

ಲಖನೌ: ಕಾವಡ್‌ ಯಾತ್ರಿಗಳನ್ನು ಗೂಂಡಾಗಳು, ಭಯೋತ್ಪಾದಕರು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶುಕ್ರವಾರ ಇಲ್ಲಿ ಕಿಡಿಕಾರಿದರು.

‘ಕೆಲವು ಮಾಧ್ಯಮಗಳಲ್ಲಿ ಇಂತಹ ಪ್ರಯೋಗ ನಡೆದಿದ್ದು, ನಮ್ಮ ಪರಂಪರೆಯನ್ನು ಅವಹೇಳನ ಮಾಡಲಾಗುತ್ತಿದೆ’ ಎಂದು ವಾರಾಣಸಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು.

‘ಕಾವಡ್‌ ಯಾತ್ರಾ ಮಾರ್ಗದಲ್ಲಿ ಅಹಿತಕರ ಘಟನೆಗಳು ನಿರಂತರವಾಗಿ ನಡೆದಿವೆ’ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಕೆಲವು ದಿನಗಳ ಬಳಿಕ ಮುಖ್ಯಮಂತ್ರಿಯವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ಕಾವಡ್‌ ಯಾತ್ರೆಯಲ್ಲಿ ಎಲ್ಲ ಸಮಾಜದವರು ಭಾಗಿಯಾಗುತ್ತಾರೆ. ಜಾತಿ–ವರ್ಗದ ಭೇದವಿಲ್ಲ. ಭಂ ಬೋಲೆ ಪಠಣ ಮಾಡುತ್ತಾ ಹೆಜ್ಜೆ ಹಾಕುವ ಭಕ್ತರನ್ನು ಗೂಂಡಾಗಳು ಎನ್ನಲಾಗುತ್ತಿದೆ. ಇದು ತಪ್ಪು. ಇಂತಹ ಮನಸ್ಥಿತಿಯು ದೇಶದ ಪರಂಪರೆಗೆ ಅವಮಾನಕಾರಿಯಾದುದು’ ಎಂದು ಯೋಗಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡಿರುವ ಕೆಲವರು ಸಮುದಾಯಗಳ ನಡುವೆ ಹಿಂಸಾಚಾರವನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಇಂತಹವರನ್ನು ಸಮಾಜದಿಂದ ಹೊರಹಾಕಬೇಕಿದೆ ಎಂದರು.

‘ಎರಡ್ಮೂರು ವರ್ಷದ ಹಿಂದೆ ಬೆಂಕಿ ಹಚ್ಚುವ ಯತ್ನ ನಡೆದಿತ್ತು. ಆಗ ನಾನು ನಿರ್ದಿಷ್ಟ ಸಮುದಾಯ ಇಂತಹ ಕೆಲಸ ಮಾಡಬಾರದು ಎಂದು ಹೇಳಿದ್ದೆ. ತನಿಖೆಯಲ್ಲಿ ದುಷ್ಕರ್ಮಿ ಕೇಸರಿ ಸ್ಕಾರ್ಫ್‌ ಧರಿಸಿದ್ದ ಎಂಬುದು ಗೊತ್ತಾಗಿದೆ. ಆದರೆ ಆತ ಅಲ್ಲಾಹು ಎಂದು ಜಪಿಸಿದ್ದಾನೆ. ಇಂತಹವರನ್ನು ಗುರುತಿಸಿ ಸಮಾಜದಿಂದ ಬಹಿಷ್ಕರಿಸಬೇಕು. ಆಗ ಮಾತ್ರ ನಾವು ರಾಷ್ಟ್ರೀಯ ಏಕತೆಯನ್ನು ಬಲಪಡಿಸಬಹುದು’ ಎಂದು ತಿಳಿಸಿದರು.

ಕಾವಡ್‌ ಯಾತ್ರಾ ಮಾರ್ಗದಲ್ಲಿ ಕೆಲವು ಯಾತ್ರಾರ್ಥಿಗಳು ಅಂಗಡಿಗಳನ್ನು ಲೂಟಿ ಮಾಡಿರುವುದಾಗಿ, ವಾಹನಗಳಿಗೆ ಜಖಂ ಮಾಡಿರುವುದಾಗಿ ವರದಿ ಪ್ರಕಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.