ADVERTISEMENT

ಎಲ್ಲಾ ಬಿಟ್ಟು ಸಿಎಂ ಯೋಗಿ ತೀರ್ಥಯಾತ್ರೆಗೆ ಹೋಗಲಿ: ಜಯಾ ಬಚ್ಚನ್ ಲೇವಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2022, 9:46 IST
Last Updated 27 ಫೆಬ್ರುವರಿ 2022, 9:46 IST
   

ಲಖನೌ: ‘ಮಹಿಳೆಯರ ಸುರಕ್ಷತೆ ಹಾಗೂ ಅಭಿವೃದ್ಧಿ ಬಗ್ಗೆ ಏನೂ ಮಾಡದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಲ್ಲಾ ಬಿಟ್ಟು ತೀರ್ಥಯಾತ್ರೆಗೆ ಹೊರಡಲಿ’ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ಪ್ರಯುಕ್ತ ಶನಿವಾರ ಸಂಜೆ ನಡೆದ ಸಮಾವೇಶದಲ್ಲಿ ಅವರು ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಅವರ ಅಭಿವೃದ್ಧಿ ಬಗ್ಗೆ ಕೇವಲ ಮಾತಿನಲ್ಲಿ ಮನೆ ಕಟ್ಟುವ ಬಿಜೆಪಿ ನಾಯಕರು, ಆ ಪಕ್ಷದ ಒಬ್ಬರೇ ಒಬ್ಬ ಸಂಸದರು ಸಂಸತ್ತಿನಲ್ಲಿ ಕಿಂಚಿತ್ತೂ ಚರ್ಚೆ ಮಾಡಿಲ್ಲ’ ಎಂದು ಟೀಕಿಸಿದರು‌.

ADVERTISEMENT

‘ಆಗ ಬ್ರಿಟಿಷರು ಭಾರತಕ್ಕೆ ಬಂದು ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋದರು. ಈಗ ಅಧಿಕಾರ ನಡೆಸುತ್ತಿರುವವರು ಬ್ರಿಟಿಷರ ಮತ್ತೊಂದು ರೂಪ. ಸಂಪತ್ತನ್ನು ಉಳ್ಳವರು ಮಾತ್ರ ದೋಚುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉತ್ತರ ಪ್ರದೇಶದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ನೋವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸಿಎಂ ಯೋಗಿ ಸಂಪೂರ್ಣ ವಿಫಲರಾಗಿದ್ದಾರೆ. ಅವರು ತೀರ್ಥಯಾತ್ರೆ ಗೆ ಹೋಗುವುದು ಉತ್ತಮ’ ಎಂದು ಲೇವಡಿ ಮಾಡಿದ್ದಾರೆ.

‘ಯೋಗಿ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆದಿವೆ ಎಂದು ಎನ್.ಸಿ.ಆರ್.ಬಿ ಹೇಳಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಷಯ’ ಎಂದು ಜಯಾ ಬಚ್ಚನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.