ADVERTISEMENT

ನೀವು ಮಕ್ಕಳನ್ನು ಹೆರುತ್ತೀರಿ, ಸರ್ಕಾರ ಅವರ ವೆಚ್ಚ ಭರಿಸಬೇಕಾ: ಬಿಜೆಪಿ ಶಾಸಕ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 11:40 IST
Last Updated 1 ಮಾರ್ಚ್ 2021, 11:40 IST
ರಮೇಶ್ ದಿವಾಕರ್/ ಚಿತ್ರ ಕೃಪೆ- ಉತ್ತರ ಪ್ರದೇಶ ವಿಧಾನಸಭೆ ವೆಬ್‌ಸೈಟ್‌
ರಮೇಶ್ ದಿವಾಕರ್/ ಚಿತ್ರ ಕೃಪೆ- ಉತ್ತರ ಪ್ರದೇಶ ವಿಧಾನಸಭೆ ವೆಬ್‌ಸೈಟ್‌    

ಲಖನೌ: ಖಾಸಗಿ ಶಾಲೆಯಲ್ಲಿ ಓದುವ ತಮ್ಮ ಮಕ್ಕಳ ಶುಲ್ಕವನ್ನು ಮನ್ನಾ ಮಾಡುವಂತೆ ಮನವಿ ಮಾಡಿದ ಮಹಿಳೆಯರನ್ನು ಉದ್ದೇಶಿಸಿ ‘ನೀವು ಮಕ್ಕಳನ್ನು ಹೆತ್ತು, ಅವರ ಶಿಕ್ಷಣ ವೆಚ್ಚವನ್ನುಸರ್ಕಾರ ಭರಿಸಬೇಕೆಂದು ನಿರೀಕ್ಷಿಸುತ್ತೀರಿ‘ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರಮೇಶ್ ದಿವಾಕರ್ ಹೇಳಿರುವುದು ಈಗ ವಿವಾದಕ್ಕೆ ಗುರಿಯಾಗಿದ್ದಾರೆ.

'ಬಚ್ಚೆ ಪೈದಾ ಕರನ್‌ ಆಪ್ ಔರ್ ಖರ್ಚ್ ಉತಾಯ್‌ ಸರ್ಕಾರ್‘ (ನೀವು ಮಕ್ಕಳನ್ನು ಮಾಡಿಕೊಳ್ಳುತ್ತೀರಿ, ಸರ್ಕಾರ ಅವರ ಖರ್ಚನ್ನು ಭರಿಸಬೇಕಾ) ಎಂಬ ಶಾಸಕರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

‌ಔರೈಯ ಎಂಬಲ್ಲಿ ಭಾನುವಾರ ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ದಿವಾಕರ್ ಈ ಹೇಳಿಕೆ ನೀಡಿದ್ದರು. ಅವರು ಇಷ್ಟಕ್ಕೆ ಸುಮ್ಮನಾಗದೇ, ‘ಸರ್ಕಾರಿ ಶಾಲೆಗಳಲ್ಲಿ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ. ನೀವು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು‘ ಎಂದು ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

ADVERTISEMENT

ಶಾಸಕ ದಿವಾಕರ್ ಮಹಿಳೆಯರೊಂದಿಗೆ ಮಾತನಾಡುವ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಸದ್ಯ ಈ ವಿಡಿಯೊ ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ದಿವಾಕರ್ ಅವರ ಹೇಳಿಕೆಯನ್ನು ಖಂಡಿಸಿರುವ ವಿರೋಧ ಪಕ್ಷದವರು, ‘ಇದು ಕೇಸರಿ ಪಕ್ಷ ಬಿಜೆಪಿಯಲ್ಲಿರುವ ಮಹಿಳಾ ವಿರೋಧಿ ನೀತಿಯನ್ನು ಬಿಂಬಿಸುತ್ತದೆ‘ ಎಂದು ದೂರಿದ್ದಾರೆ. ‘ಬಿಜೆಪಿ ನಾಯಕರಿಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವವಿಲ್ಲ‘ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.