ADVERTISEMENT

ಕೋವಿಡ್‌ ಕಾಲದಲ್ಲೂ ಸೇವೆ: ರೈಲ್ವೆ ಸಿಬ್ಬಂದಿಗೆ ಧ್ಯನವಾದ ಅರ್ಪಿಸಿದ ಸಚಿವ

13 ಲಕ್ಷ ಸಿಬ್ಬಂದಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಕೆ

ಪಿಟಿಐ
Published 3 ಏಪ್ರಿಲ್ 2021, 12:21 IST
Last Updated 3 ಏಪ್ರಿಲ್ 2021, 12:21 IST
ಪಿಯೂಷ್‌ ಗೋಯಲ್
ಪಿಯೂಷ್‌ ಗೋಯಲ್   

ನವದೆಹಲಿ: ದೇಶದಲ್ಲಿ ಕೋವಿಡ್‌ ತಂದೊಡ್ಡಿದ್ದ ಬಿಕ್ಕಟ್ಟಿನ ನಡುವೆ ವಿರಮಿಸಿಕೊಳ್ಳದೇ ಸೇವೆ ಸಲ್ಲಿಸಿದ ರೈಲ್ವೆ ಇಲಾಖೆಯ 13 ಲಕ್ಷ ಸಿಬ್ಬಂದಿಗೆ ರೈಲ್ವೆ ಸಚಿವ ಪಿಯೂಷ್‌ ಗೋಯಲ್ ಅವರು ಶನಿವಾರ ಪತ್ರದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

‘ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಇಡೀ ವಿಶ್ವವೇ ಸ್ತಬ್ಧವಾಗಿದ್ದಾಗ ರೈಲ್ವೆ ಸಿಬ್ಬಂದಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ‘ ಎಂದು ಗೋಯಲ್ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದ್ದಾರೆ

‘ದೇಶ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾಗಲೂ ರೈಲ್ವೆ ಇಲಾಖೆ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲು, ರೈತರಿಗಾಗಿ ಗೊಬ್ಬರ ಮತ್ತು ಗ್ರಾಹಕರಿಗೆ ಆಹಾರ–ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ನೆರವಾಗಿದೆ. ಸಿಬ್ಬಂದಿಯ ಇಚ್ಛಾಶಕ್ತಿ ಮತ್ತು ತಾಳ್ಮೆಯಿಂದಾಗಿ ಈ ಬಿಕ್ಕಟ್ಟನ್ನು ನಾವು ಎದುರಿಸಲು ಸಾಧ್ಯವಾಯಿತು’ ಎಂದು ಅವರು ಇಲಾಖೆ ಸಿಬ್ಬಂದಿಯ ಸೇವೆಯನ್ನು ಸ್ಮರಿಸಿದ್ದಾರೆ.

ADVERTISEMENT

‘ಲಾಕ್‌ಡೌನ್‌ ಸಮಯಲ್ಲಿ 4,621 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿವೆ. ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ 63 ಲಕ್ಷಕ್ಕೂ ಹೆಚ್ಚು ಜನರನ್ನು ಅವರ ಮನೆಗಳಿಗೆ ತಲುಪಿಸಲು ಈ ರೈಲುಗಳು ನೆರವಾಗಿವೆ. ಕಿಸಾನ್‌ ರೈಲ್ವೆ ಸೇವೆಯು ‘ಅನ್ನದಾತ’ನಿಗೆ ನೇರವಾಗಿ ದೊಡ್ಡ ಮಾರುಕಟ್ಟೆಗಳೊಂದಿಗೆ ಸಂಪರ್ಕ ಕಲ್ಪಿಸಲು ಸಹಾಯ ಮಾಡಿದೆ. ರೈಲ್ವೆ ಸಿಬ್ಬಂದಿ ದೇಶದ ಲಕ್ಷಾಂತರ ಜನರ ಮನಸ್ಸು ಗೆದ್ದಿದ್ದಾರೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.