
ಏಳು ವರ್ಷಗಳಿಂದ ಒಂದೇ ಕಾಲಿನ ಮೇಲೆ ನಿಂತ 26ರ ಸಾಧು
ಪ್ರಯಾಗರಾಜ್: ಇಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿ ಭಸ್ಮ ಲೇಪಿತ ತಪಸ್ವಿಗಳು, ಮಂತ್ರ ಜಪಿಸುತ್ತ ಕುಳಿತ ಸಾಧುಗಳ ನಡುವೆ, ಏಳು ವರ್ಷಗಳಿಂದ ಒಂಟಿ ಕಾಲಿನಲ್ಲಿ ನಿಂತು ಧ್ಯಾನ ಮಾಡುತ್ತಿರುವ 26 ವರ್ಷದ ಸಾಧುವೊಬ್ಬರು ಗಮನ ಸೆಳೆದಿದ್ದಾರೆ.
ಶಂಕರಪುರಿ ಎನ್ನುವ ಈ ಯುವ ಸಾಧು ಬಿಹಾರ ಮೂಲದರು. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿ ಈ ಸಾಧು ಕಾಣಿಸಿಕೊಂಡಿದ್ದಾರೆ.
‘ನಾನು ನೈಮಿಷಾರಣ್ಯಕ್ಕೆ ಸೇರಿದವನು. ಅಲ್ಲಿ 88 ಸಾವಿರ ಋಷಿ–ಮುನಿಗಳು ವಾಸಿಸುತ್ತಾರೆ. ನಾನು ಅಲ್ಲಿಯೇ ಹುಟ್ಟಿದ್ದು, ನನ್ನ ಆಶ್ರಮವೂ ಅಲ್ಲಿದೆ. ನೈಮಿಷಾರಣ್ಯದ ಭೂಮಿಯಿಂದಲೇ ನನಗೆ ನಿಂತುಕೊಳ್ಳಲೇಬೇಕು ಎಂಬ ಆಲೋಚನೆ ಮನಸ್ಸಿಗೆ ಬಂದಿತು. ನಾನು ಆರು ವರ್ಷ ವಯಸ್ಸಿನಿಂದಲೂ ಸಾಧುವಾಗಿದ್ದೇನೆ’ ಎಂದು ಶಂಕರಪುರಿ ಪಿಟಿಗೆ ತಿಳಿಸಿದ್ದಾರೆ.
ವಿಶ್ರಾಂತಿ, ದೈನಂದಿನ ಕೆಲಸ ಆಹಾರ ಸೇವನೆ ಬಗ್ಗೆ ವಿವರಿಸಿರುವ ಯುವ ಸಾಧು, ‘ತಲೆಯನ್ನು ಮರದ ತೊಟ್ಟಿಲಿನ ರೀತಿಯಲ್ಲಿರುವ ತುಂಡಿನ ಮೇಲೆ ಇಟ್ಟು ನಿದ್ದೆ ಮಾಡುತ್ತೇನೆ. ಇದೇ ಭಂಗಿಯಲ್ಲಿ ಆಹಾರ, ನೀರಿನ ಸೇವನೆ ಮತ್ತು ದೈನಂದಿನ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ’ ಎಂದು ವಿವರಿಸಿದ್ದಾರೆ.
ಶತಮಾನಗಳಿಂದ ಮಾಘ ಮೇಳವು ತಪಸ್ವಿಗಳ ತೀವ್ರವಾದ ತಪಸ್ಸು ಮತ್ತು ಆಧ್ಯಾತ್ಮಿಕ ಶಿಸ್ತನ್ನು ಪ್ರದರ್ಶಿಸುವ ವೇದಿಕೆಯಾಗಿದೆ. 44 ದಿನಗಳ ಕಾಲ ನಡೆಯುವ ಈ ಧಾರ್ಮಿಕ ಉತ್ಸವ ಈ ಬಾರಿ ಜನವರಿ 3ರಿಂದ ಆರಂಭವಾಗಿದ್ದು, ಫೆಬ್ರುವರಿ 15ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಸಮಯದಲ್ಲಿ ದೇಶ, ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಸಂಗಮದಲ್ಲಿ ಮುಳುಗೆದ್ದು, ಪವಿತ್ರ ಸ್ನಾನ ಕೈಗೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.