ADVERTISEMENT

'ನನ್ನ ನೋವಿಗಿಂತ ಜನರ ನೋವು ದೊಡ್ಡದು': ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿ

ಏಜೆನ್ಸೀಸ್
Published 15 ಮಾರ್ಚ್ 2021, 11:36 IST
Last Updated 15 ಮಾರ್ಚ್ 2021, 11:36 IST
ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿ
ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: 'ನನ್ನ ನೋವಿಗಿಂತ ಜನರ ನೋವು ದೊಡ್ಡದಾಗಿದೆ. ಆದ್ದರಿಂದ, ಜನರ ನಡುವೆಯೇ ಇರಲು ನಾನು ನಿರ್ಧರಿಸಿದ್ದೇನೆ' ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ' ನಾನು ಗಾಯಗೊಂಡ ನಂತರ ಮನೆಗೆ ಸೀಮಿತವಾಗಬಹುದೆಂದು ಕೆಲವರು ಭಾವಿಸಿದ್ದರು. ಆದರೆ, ಜನರ ನೋವು ನನ್ನ ನೋವಿಗಿಂತ ದೊಡ್ಡದಾಗಿದೆ. ಆ ಕಾರಣ, ನಾನು ಜನರ ನಡುವೆಯೇ ಇರಲು ನಿರ್ಧರಿಸಿದ್ದೇನೆ' ಎಂದು ತಿಳಿಸಿದ್ದಾರೆ.

ಗಾಲಿಕುರ್ಚಿಯಲ್ಲಿಯೇ ಕುಳಿತು ಸಾರ್ವಜನಿಕ ಭಾಷಣ ಮಾಡಿರುವ ಮಮತಾ ಬ್ಯಾನರ್ಜಿ, 'ಟಿಎಂಸಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ನಿಮಗೆ ಉಚಿತ ಪಡಿತರ ದೊರೆಯುವುದು ಮುಂದುವರೆಯಲಿದೆ. ನಾವು ನಿಮ್ಮ ಮನೆ ಬಾಗಿಲಿಗೇ ಪಡಿತರವನ್ನು ತಲುಪಿಸಲಿದ್ದೇವೆ. ಮೇ ನಂತರ ನೀವು ಅಂಗಡಿಗಳಿಗೆ ತೆರಳಬೇಕಿಲ್ಲ' ಎಂದು ಜನರಿಗೆ ಭರವಸೆ ನೀಡಿದ್ದಾರೆ.

ADVERTISEMENT

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ಪಶ್ಚಿಮ ಬಂಗಾಳ ಸರ್ಕಾರ ಪ್ರಾರಂಭಿಸಿತ್ತು.

'ಲಾಕ್‌ಡೌನ್‌ನ ಮೊದಲ ಮೂರು ತಿಂಗಳು, ನಾವು ಪ್ರತಿ ಕುಟುಂಬಕ್ಕೆ ಐದು ಕಿಲೋ ಅಕ್ಕಿ ನೀಡಿದ್ದೇವೆ. ತದನಂತರದ ಮೂರು ತಿಂಗಳಲ್ಲಿ ನಾವು ಪ್ರತಿ ಕುಟುಂಬಕ್ಕೆ ಐದು ಕಿಲೋ ಅಕ್ಕಿ ಮತ್ತು ಸಮಾನ ಪ್ರಮಾಣದ ಹಿಟ್ಟನ್ನು ಒದಗಿಸಿದ್ದೇವೆ. ನಾವೂ ನೀಡಿದ್ದು ಕೇಂದ್ರಕ್ಕಿಂತ ಉತ್ತಮ ಗುಣಮಟ್ಟದ ಅಕ್ಕಿಯಾಗಿದೆ. ಒಟ್ಟಾರೆ, 10 ಕೋಟಿ ಜನರಿಗೆ ಪಡಿತರವನ್ನು ಟಿಎಂಸಿ ಸರ್ಕಾರ ಒದಗಿಸಿದೆ' ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್‌ 5 ರಂದು ಟಿಎಂಸಿಯು ತನ್ನ 291 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಚುನಾವಣೆಯು ಮಾರ್ಚ್‌ 27 ರಂದು ಆರಂಭಗೊಳ್ಳಲಿದ್ದು, 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಮತ ಎಣಿಕೆ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.