ADVERTISEMENT

ನಿರುದ್ಯೋಗದಿಂದ ಬೇಸತ್ತು ಉಲ್ಫಾ ಸೇರುತ್ತಿರುವ ಅಸ್ಸಾಂ ಯುವಕರು: ಕಾಂಗ್ರೆಸ್‌ ಸಂಸದ

ಪಿಟಿಐ
Published 23 ಮಾರ್ಚ್ 2022, 14:40 IST
Last Updated 23 ಮಾರ್ಚ್ 2022, 14:40 IST
ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯಿ. ಪಿಟಿಐ ಚಿತ್ರ
ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯಿ. ಪಿಟಿಐ ಚಿತ್ರ   

ನವದೆಹಲಿ: ನಿರುದ್ಯೋಗದಿಂದ ಬೇಸತ್ತ ಅಸ್ಸಾಂನ ಯುವಕರು ಉಲ್ಫಾ ಬಂಡುಕೋರ ಸಂಘಟನೆಯನ್ನು ಸೇರುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯಿ ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಂಸತ್‌ ಕಲಾಪದ ಶೂನ್ಯ ವೇಳೆಯಲ್ಲಿ ಮಾತನಾಡಿದ ಗೊಗೊಯಿ ಅವರು, 'ಅಸ್ಸಾಂನಲ್ಲಿ ಯುವಕರು 'ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸ್ಸಾಂ (ಉಲ್ಫಾ) ಬಂಡುಕೋರ ಸಂಘಟನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಿರುದ್ಯೋಗ. ಇದು ಕಳವಳಕಾರಿ ವಿಚಾರ. ತಕ್ಷಣ ಸರ್ಕಾರ ಈ ಬಗ್ಗೆ ನಿಗಾ ವಹಿಸಿ, ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.

'ಸುಲಭವಾಗಿ ದುಡ್ಡು ಮಾಡುವ ಉದ್ದೇಶದಿಂದ ಉಲ್ಫಾ ಸಂಘಟನೆ ಸೇರುವ ಮೂಲಕ ತಮ್ಮ ಹಾಗೂ ಕುಟುಂಬದ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಯುವಕರು ಈ ಸಂಘಟನೆ ಸೇರ್ಪಡೆಗೊಳ್ಳುತ್ತಿರುವುದು ಹೆಚ್ಚಿದೆ. ಇದಕ್ಕೆ ಉದ್ಯೋಗ ಅವಕಾಶಗಳ ಕೊರತೆಯೇ ಮುಖ್ಯ ಕಾರಣ' ಎಂದು ಗೊಗೊಯಿ ವಿವರಿಸಿದರು.

ADVERTISEMENT

'ಅಂತರರಾಷ್ಟ್ರೀಯ ಗಡಿ ಹಂಚಿಕೊಂಡಿರುವ ರಾಜ್ಯಗಳ ಈ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿಕೊಂಡು ಸಮಸ್ಯೆ ಬಗೆಹರಿಸುವುದಕ್ಕಾಗಿ ಕೇಂದ್ರ ಸರ್ಕಾರವು ಗುಪ್ತಚರ ಮತ್ತು ಭದ್ರತಾ ತಜ್ಞರನ್ನು ಕಳುಹಿಸಬೇಕು' ಎಂದು ಒತ್ತಾಯಿಸಿದರು.

'ಕಠಿಣ ಶ್ರಮದ ಫಲವಾಗಿ ರಾಜ್ಯದಲ್ಲಿ ನೆಲೆಸಿರುವ ಶಾಂತಿಯನ್ನು ಕಾಪಾಡಬೇಕು' ಎಂದು ಗೊಗೊಯಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.