ADVERTISEMENT

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವಹೇಳನ: YSRCP ನಾಯಕ ಅಂಬಟಿ ರಾಂಬಾಬು ಬಂಧನ

ಪಿಟಿಐ
Published 1 ಫೆಬ್ರುವರಿ 2026, 5:09 IST
Last Updated 1 ಫೆಬ್ರುವರಿ 2026, 5:09 IST
   

ಗುಂಟೂರು ( ಆಂಧ್ರಪ್ರದೇಶ): ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ವೈಎಸ್‌ಆರ್‌ಸಿಪಿಯ ಹಿರಿಯ ನಾಯಕ, ಮಾಜಿ ಸಚಿವ ಅಂಬಟಿ ರಾಂಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ರಾಂಬಾಬು ಅವರನ್ನು ಬಂಧಿಸಲಾಗಿದೆ ಎಂದು ಗುಂಟೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಕುಲ್ ಜಿಂದಾಲ್ ಖಚಿತಪಡಿಸಿದ್ದಾರೆ.

ಸಿಎಂ ವಿರುದ್ಧದ ಅವಹೇಳನಕಾರಿ ಹೇಳಿಕೆ ನೀಡಿದ ರಾಂಬಾಬು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ, ಟಿಡಿಪಿಯ ನೂರಾರು ಕಾರ್ಯಕರ್ತರು ಅವರ ಮನೆ ಮುಂದೆ ಜಮಾಯಿಸಿ ಗಲಾಟೆ ಆರಂಭಿಸಿದ್ದಾರೆ. ಈ ಗೊಂದಲಮಯ ಪರಿಸ್ಥಿತಿಯ ನಡುವೆ ಅವರನ್ನು ಬಂಧಿಸಲಾಗಿದೆ.

ADVERTISEMENT

ರಾಂಬಾಬು ಅವರ ಹೇಳಿಕೆಗೆ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಹಲವಾರು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಂಬಾಬು ವಿರುದ್ಧ ಕೊಲೆ ಯತ್ನ ನಡೆದಿದೆ ಎಂದು ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್‌ಸಿಪಿ, ಆರೋಪಿಸಿದೆ.

ಆಂಧ್ರಪ್ರದೇಶದಲ್ಲಿ ಜಂಗಲ್‌ ರಾಜ್‌ ಆಡಳಿತವಿದೆ. ಸಿಎಂ ನಾಯ್ಡು ಅವರು ಕಾನೂನುಬಾಹಿರ ಮತ್ತು ರಾಜಕೀಯ ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ವಿರೋಧ ಪಕ್ಷದ ನಾಯಕರ ವಿರುದ್ಧ ಹಿಂಸಾಚಾರ ಮತ್ತು ಕೊಲೆ ಪ್ರಯತ್ನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸರ್ಕಾರವನ್ನು ಪ್ರಶ್ನಿಸುವ ಧ್ವನಿಗಳನ್ನು ಬೆದರಿಸಲು ಉದ್ದೇಶಪೂರ್ವಕವಾಗಿ ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದು ವೈಎಸ್ಆರ್‌ಸಿಪಿ ಪತ್ರಿಕಾ ಪ್ರಕಟಣೆಯಲ್ಲಿ ಜಗನ್ ಮೋಹನ್ ರೆಡ್ಡಿ ದೂರಿದ್ದಾರೆ.

ಏತನ್ಮಧ್ಯೆ, ವೈಎಸ್‌ಆರ್‌ಸಿಪಿ ಸಂಸದೀಯ ಪಕ್ಷದ ನಾಯಕ ವೈ.ವಿ. ಸುಬ್ಬಾ ರೆಡ್ಡಿ ಅವರು ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ತಕ್ಷಣ ಮಧ್ಯಪ್ರವೇಶಿಸುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.