ADVERTISEMENT

ಲಡಾಖ್ ಸಂಘರ್ಷ ಖಂಡಿಸಿ ಜೊಮ್ಯಾಟೊ ಕಂಪನಿಯ ಟೀಶರ್ಟ್ ಸುಟ್ಟು ನೌಕರರ ಪ್ರತಿಭಟನೆ

ಪಿಟಿಐ
Published 28 ಜೂನ್ 2020, 5:22 IST
Last Updated 28 ಜೂನ್ 2020, 5:22 IST
ಜೊಮ್ಯಾಟೊ ನೌಕರ (ಸಂಗ್ರಹ ಚಿತ್ರ)
ಜೊಮ್ಯಾಟೊ ನೌಕರ (ಸಂಗ್ರಹ ಚಿತ್ರ)   

ಕೋಲ್ಕತ್ತ: ಕಳೆದ ವಾರ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರ ಜತೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಚೀನಾ ಸೇನಾಪಡೆಯ ಈ ಕೃತ್ಯವನ್ನು ಖಂಡಿಸಿ ಕೋಲ್ಕತ್ತದ ಜೊಮ್ಯಾಟೊ ನೌಕರರು ತಮ್ಮ ಕಂಪನಿ ಟೀಶರ್ಟ್ ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಚೀನಾ ಮೂಲದ ಜೊಮ್ಯಾಟೊ ಕಂಪನಿ ವಿರುದ್ಧ ನಡೆದ ಈ ಪ್ರತಿಭಟನೆಯಲ್ಲಿ ಜನರು ಆಹಾರ ವಸ್ತುಗಳನ್ನು ಜೊಮ್ಯಾಟೊ ಮೂಲಕ ತರಿಸುವುದನ್ನು ನಿಲ್ಲಿಸಬೇಕು ಎಂದು ನೌಕರರುಆಗ್ರಹಿಸಿದ್ದಾರೆ. ಅದೇ ವೇಳೆ ಕೆಲವು ನೌಕರರು ಕೆಲಸ ತೊರೆದಿರುವುದಾಗಿ ಹೇಳಿದ್ದಾರೆ.

2018ರಲ್ಲಿ ಚೀನಾದ ಪ್ರಮುಖ ಸಂಸ್ಥೆಯಾದ ಅಲಿಬಾಬಾ ಗ್ರೂಪ್‌ನ ಅಂಗವಾದ ಆಂಟ್ ಫಿನಾನ್ಶಿಯಲ್ ಜೊಮ್ಯಾಟೊ ಕಂಪನಿಯಲ್ಲಿ 210 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ನಡೆಸಿತ್ತು. ಇತ್ತೀಚೆಗೆ ಆಂಟ್ ಫಿನಾನ್ಶಿಯಲ್ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.

ADVERTISEMENT

ಚೀನಾದ ಕಂಪನಿಗಳು ನಮ್ಮ ದೇಶದಲ್ಲಿ ಲಾಭ ಗಳಿಸಿ, ನಮ್ಮದೇಶದ ಯೋಧರ ಮೇಲೆ ದಾಳಿ ನಡೆಸುತ್ತಿವೆ. ಅವರು ನಮ್ಮ ನೆಲವನ್ನು ವಶಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಒಪ್ಪುವುದಿಲ್ಲ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

ಅದೇ ವೇಳೆ ನಾವು ಹಸಿವಿನಿಂದ ಬಳಲಿದರೂ ಸಮಸ್ಯೆ ಇಲ್ಲ. ಆದರೆ ಚೀನಾ ಹೂಡಿಕೆ ಮಾಡಿರುವ ಕಂಪನಿಯಲ್ಲಿ ಕೆಲಸ ಮಾಡಲ್ಲ ಎಂದು ಜೊಮ್ಯಾಟೊ ನೌಕರರೊಬ್ಬರು ಹೇಳಿದ್ದಾರೆ .
ಮೇ ತಿಂಗಳಲ್ಲಿ ಜೊಮ್ಯಾಟೊ 520 ನೌಕರರನ್ನು ವಜಾ ಮಾಡಿತ್ತು.ಈ ಪ್ರತಿಭಟನೆ ಬಗ್ಗೆ ಜೊಮ್ಯಾಟೊ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.