ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಗಾಯಕ ಜುಬೀನ್ ಗರ್ಗ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪನಮನ ಅರ್ಪಿಸಿದರು.
ಗುವಾಹಟಿ: ಖ್ಯಾತ ಗಾಯಕ ಜುಬೀನ್ ಗರ್ಗ್ ಅವರು ಅಸ್ಸಾಂ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
‘ಜುಬೀನ್ ಗರ್ಗ್ ಅವರ ಸಂಗೀತವು ನಮ್ಮ ಭಾವನೆಗಳೊಂದಿಗೆ ನೇರವಾಗಿ ಮಾತನಾಡುತ್ತಿತ್ತು. ಅವರ ಸಂಗೀತವು ಅಸ್ಸಾಂನ ವೈವಿಧ್ಯತೆಯನ್ನು ಸರಿಹೊಂದಿಸುವಷ್ಟು ವಿಶಾಲವಾಗಿತ್ತು. ಗರ್ಗ್ ಧೈರ್ಯವಂತರು, ಹುಟ್ಟು ಬಂಡಾಯಗಾರರಾಗಿದ್ದರು. ತಮ್ಮ ಅಭಿಪ್ರಾಯಗಳಿಗೆ ಬದ್ಧರಾಗಿದ್ದರು. ಜುಬೀನ್ ಅಸ್ಸಾಂ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ’ ಎಂದು ಶರ್ಮಾ ‘ಎಕ್ಸ್’ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
‘ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಂಗಪುರಕ್ಕೆ ತೆರಳಿದ್ದ ಜುಬೀನ್ ಅವರು, ಸೆಪ್ಟೆಂಬರ್ 19ರಂದು ಸ್ಕೂಬಾ ಡೈವಿಂಗ್ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಅವರ ಮೃತದೇಹವನ್ನು ಭಾರತಕ್ಕೆ ತರಲಾಗಿತ್ತು.
ಗರ್ಗ್ ಅವರ ಅಂತಿಮ ಸಂಸ್ಕಾರವನ್ನು ರಾಜ್ಯ ಸರ್ಕಾರಿ ಗೌರವಗಳೊಂದಿಗೆ ಗುವಾಹಟಿಯ ಹೊರವಲಯ ಕಾಮಾರ್‌ಕುಚಿಯಲ್ಲಿ ಮಂಗಳವಾರ ನೆರವೇರಿಸಲಾಯಿತು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಸೇರಿದಂತೆ ಸಾವಿರಾರು ಜನರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಹಲವರು ಜುಬೀನ್ ಅವರು ಹಾಡಿದ್ದ ಹಾಡನ್ನು ಹಾಡುವ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.