ADVERTISEMENT

ಅಕ್ರಮ ಗಣಿಗಾರಿಕೆ: ಇಂದು ಸಿಇಸಿ ಆಗಮನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 20:10 IST
Last Updated 24 ಮಾರ್ಚ್ 2011, 20:10 IST

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶದಂತೆ ರಚನೆ ಆಗಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶುಕ್ರವಾರ ಇಲ್ಲಿಗೆ ಬರಲಿದೆ. ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಆರು ತಿಂಗಳಿನಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.
 
ಸಮಿತಿಯ ಅಧ್ಯಕ್ಷ ಪಿ.ವಿ. ಜಯಕೃಷ್ಣನ್, ಸದಸ್ಯ ಕಾರ್ಯದರ್ಶಿ ಎಂ.ಕೆ. ಜಿವ್ರಾಜ್‌ಕಾ, ಮಹೆಂದ್ರ ವ್ಯಾಸ್ ಮತ್ತು ನ್ಯಾಯಾಲಯದ ಸಲಹೆಗಾರ ಎ.ಡಿ.ಎನ್. ರಾವ್ ಮತ್ತು ಸಿದ್ಧಾರ್ಥ ಚೌಧರಿ ಅವರು ಬರಲಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರೊಂದಿಗೆ ಶುಕ್ರವಾರ ಸಭೆ ನಡೆಸಲಿರುವ ಸಮಿತಿ, ಶನಿವಾರ ಮತ್ತು ಭಾನುವಾರ ಬಳ್ಳಾರಿಗೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸಲಿದೆ.

ಶನಿವಾರ ಮಧ್ಯಾಹ್ನ ಹೊಸಪೇಟೆಗೆ ತೆರಳಲಿರುವ ಸಮಿತಿ, ಅಲ್ಲಿ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ಸಮಿತಿಯು ಭಾನುವಾರ ರಾಮಗಡ ಸಂರಕ್ಷಿತ ಅರಣ್ಯ ಮತ್ತು ಸಂಡೂರಿಗೆ ಭೇಟಿ ನೀಡಲಿದೆ. ಸೋಮವಾರ ಬೆಂಗಳೂರಿಗೆ ವಾಪಸಾಗಲಿರುವ ಸಮಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತಿತರ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.