ADVERTISEMENT

ಅಡಿಕೆ,ಕೊಬ್ಬರಿ ಗೋದಾಮು ಭಸ್ಮ- 18 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 17:25 IST
Last Updated 14 ಫೆಬ್ರುವರಿ 2011, 17:25 IST
ಅಡಿಕೆ,ಕೊಬ್ಬರಿ ಗೋದಾಮು ಭಸ್ಮ- 18 ಲಕ್ಷ ಹಾನಿ
ಅಡಿಕೆ,ಕೊಬ್ಬರಿ ಗೋದಾಮು ಭಸ್ಮ- 18 ಲಕ್ಷ ಹಾನಿ   

ಕಡೂರು: ತಾಲ್ಲೂಕಿನ ಚನ್ನಾಪುರ ಗ್ರಾಮದ ರೈತ ನಿಂಗಪ್ಪ ಮತ್ತು ಸಹೋದರ ಮಲ್ಲಿಕಾರ್ಜುನ ಎಂಬವರಿಗೆ ಸೇರಿದ ಗೋದಾಮಿಗೆ ಸೋಮವಾರ ನಸುಕಿನಲ್ಲಿ ಬೆಂಕಿ ತಗುಲಿದ್ದು, ರೂ. 18 ಲಕ್ಷಕ್ಕೂ ಅಧಿಕ ಮೌಲ್ಯದ ಅಡಿಕೆ ಮತ್ತು ಕೊಬ್ಬರಿ ಸುಟ್ಟು ಬೂದಿಯಾಗಿದೆ.

ನಿಂಗಪ್ಪ ಮತ್ತು ಮಲ್ಲಿಕಾರ್ಜುನ್ ಅಡಿಕೆ ಚೇಣಿ ಮಾಡಿ ಮನೆ ಹಿಂಭಾಗದ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದರು. ಅಗ್ನಿ ಆಕಸ್ಮಿಕದಲ್ಲಿ 102 ಚೀಲ ಚೇಣಿ ಅಡಿಕೆ, 12 ಸಾವಿರಕ್ಕೂ ಹೆಚ್ಚು ಕೊಬ್ಬರಿ, 10 ಚೀಲ ರಾಗಿ, 2 ಚೀಲ ಅಕ್ಕಿ ಪೂರ್ಣ ಬೆಂಕಿಗಾಹುತಿಯಾಗಿದೆ.

ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ಮನೆಯವರು ಕೂಗಿಕೊಂಡರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಬೆಂಕಿ ನಂದಿಸಲು ಯತ್ನಿಸಿದರು ಆದರೆ ಕೊಬ್ಬರಿಯಲ್ಲಿ ಎಣ್ಣೆ ಅಂಶವಿದ್ದುದರಿಂದ ಜ್ವಾಲೆಯ ಆಟಾಟೋಪ ಜೋರಾಗಿಯೇ ಇದ್ದಿತು. ಪರಿಣಾಮ ಬೆಂಕಿ ಸುಲಭಕ್ಕೆ ನಂದದೇ ಗೋದಾಮಿನಲ್ಲಿದ್ದ ಅಷ್ಟೂ ದಾಸ್ತಾನು ಬೂದಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್‌ಸರ್ಕಿಟ್ ಕಾರಣವಿರಬಹುದು ಎಂದು ಅಂದಾಜು ಮಾಡಲಾಗಿದೆ. ಕಡೂರಿನ ಅಗ್ನಿಶಾಮಕ ದಳ ಕಚೇರಿಯನ್ನು ಸಂಪರ್ಕಿಸಲೆತ್ನಿಸಿದರೂ ದೂರವಾಣಿ ಕರೆಯನ್ನು ಯಾರೂ ಸ್ವೀಕರಿಸಲೇ ಇಲ್ಲ. ನಂತರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಲಾಯಿತು. ಪೊಲೀಸರಿಂದ ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭಸ್ಮವಾದ ಚೇಣಿ ಅಡಿಕೆ ಮೌಲ್ಯವೇ ರೂ. 10 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.