ADVERTISEMENT

ಅಡ್ವಾಣಿ ರಥಯಾತ್ರೆ ಭ್ರಷ್ಟಾಚಾರದ ಪರವೇ ?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಹುಬ್ಬಳ್ಳಿ: `ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ತಾವು ಆರಂಭಿಸಿರುವ ಜನಚೇತನ ಯಾತ್ರೆ ಭ್ರಷ್ಟಾಚಾರದ ವಿರುದ್ಧವೇ ಅಥವಾ ಪರವೇ ಎಂಬುದನ್ನು ಯಾತ್ರೆ ರಾಜ್ಯಕ್ಕೆ ಪ್ರವೇಶಿಸುವ ಮುನ್ನವೇ ಸ್ಪಷ್ಟಪಡಿಸಬೇಕು~ ಎಂದು ಸಂಸದ ಎಚ್.ವಿಶ್ವನಾಥ್ ಆಗ್ರಹಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, `ರಾಜ್ಯದಲ್ಲಿ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಗೃಹಮಂತ್ರಿ ಆರ್.ಅಶೋಕ  ಅವರ ವಿರುದ್ಧವೇ ಗುರುತರ ಆರೋಪ ಕೇಳಿ ಬಂದಿದೆ. ಅಂತಹ ಕಳಂಕಿತರನ್ನು ಅಧಿಕಾರದಲ್ಲಿ ಮುಂದುವರಿಯಲು ಬಿಟ್ಟು ಯಾತ್ರೆ ನಡೆಸಿದರೆ ಏನು ಪ್ರಯೋಜನ~ ಎಂದು ಕೇಳಿದರು.
 
`ಯಾತ್ರೆಯಲ್ಲಿ ಅಡ್ವಾಣಿ ಅವರೊಂದಿಗಿರುವ ಅನಂತಕುಮಾರ್ ಮೇಲೆ ಅಂಟಿಕೊಂಡ ಹುಡ್ಕೊ ಹಗರಣದ ಕಳಂಕ ಇನ್ನೂ ಹೋಗಿಲ್ಲ. ನಿತಿನ್ ಗಡ್ಕರಿ ಅವರಂತೂ ಬಳ್ಳಾರಿಗೆ ಹೋಗಿ ಚಿನ್ನದ ಖಡ್ಗ ಕಾಣಿಕೆ ತೆಗೆದುಕೊಂಡು ಬಂದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಬಂದು ಕಾಣಿಕೆ ಒಯ್ಯುತ್ತ್ದಿ ಅಮ್ಮ ಸುಷ್ಮಾ ಸ್ವರಾಜ್ ಈಗ ಮಲತಾಯಿ ಆಗಿದ್ದಾರೆ. ಇಂತಹ ನಾಯಕರಿಂದ ಯಾತ್ರೆಯ ಉದ್ದೇಶ ಹೇಗೆ ಈಡೇರುತ್ತದೆ~ ಎಂದು ಅವರು ಪ್ರಶ್ನಿಸಿದರು.

`ಹಿಂದೆ ಬೆನ್ನುತಟ್ಟಿ ಅಕ್ರಮಕ್ಕೆ ಹುರಿದುಂಬಿಸಿದ್ದ ತಾಯಿ ಇವತ್ತು ಮಕ್ಕಳನ್ನೇ ತೊರೆದುಬಿಟ್ಟಳೆ~ ಎಂದು ಕೇಳಿದ ಅವರು, `ಮಕ್ಕಳ ಕೈಯಿಂದ ಮಾಡಬಾರದ್ದನ್ನೆಲ್ಲ ಮಾಡಿಸಿ, ಅವರನ್ನು ನಡುನೀರಲ್ಲಿ ಬಿಟ್ಟು ಹಾಯಾಗಿರುವ ಇಂತಹ ತಾಯಂದಿರು ಭಾರತದಲ್ಲಿ ಮತ್ತೊಬ್ಬರಿಲ್ಲ~ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.