ಬೆಂಗಳೂರು: ಪ್ರಾಕೃತಿಕ ವಿಕೋಪದ ಕಾರಣ ಜಪಾನ್‌ನಲ್ಲಿ ಸಂಭವಿಸಿದ ಅಣು ಅವಘಡದ ಹಿನ್ನೆಲೆಯಲ್ಲಿ ಭಾರತದ ಅಣುಶಕ್ತಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂಬ ವಾದಗಳು ‘ಮೂರ್ಖತನದ್ದು’ ಎಂದು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಸಿ.ಎನ್.ಆರ್. ರಾವ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಜವಾಹರಲಾಲ್ ನೆಹರೂ ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಸುನಾಮಿಯಂತಹ ಪ್ರಾಕೃತಿಕ ಅವಘಡಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಪ್ರಾಕೃತಿಕ ವಿಕೋಪದ ಹೆಸರಿನಲ್ಲಿ ಅಣುಶಕ್ತಿ ಚಟುವಟಿಕೆಗಳನ್ನು ತಡೆಹಿಡಿಯಬೇಕು ಎಂದು ವಾದಿಸುವುದು ಅರ್ಥಹೀನ’ ಎಂದು ಉತ್ತರಿಸಿದರು.
ನೈಸರ್ಗಿಕ ವಿಕೋಪ ಸಂಭವಿಸಲಿ, ಸಂಭವಿಸದಿರಲಿ ನಮ್ಮ ಅಣುಸ್ಥಾವರಗಳ ಮೇಲೆ ಕಣ್ಗಾವಲಿಡಬೇಕು ಎನ್ನುವುದು ಸರಿ. ಆದರೆ ಅಣುಶಕ್ತಿ ಸಂಬಂಧಿತ ಚಟುವಟಿಕೆಗಳನ್ನು ತಡೆಹಿಡಿಯಬೇಕು ಎಂಬುದು ಸರಿಯಲ್ಲ. ಅಣುಸ್ಥಾವರಗಳನ್ನು ಭೂಕಂಪ ಸಂಭವಿಸದ ಪ್ರದೇಶಗಳಲ್ಲಿ ಸ್ಥಾಪಿಸಬೇಕು ಎಂದರು.ಮಂಗಳೂರಿನಲ್ಲಿ ವಿಮಾನ ದುರಂತ ಸಂಭವಿಸಿ ನೂರಾರು ಮಂದಿ ಸಾವನ್ನಪ್ಪಿದರು. ಹಾಗೆಂದು ವಿಮಾನ ಯಾನವನ್ನೇ ರದ್ದುಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಿ.ಎಂ. ಭೇಟಿ: ‘ವಿದ್ಯಾರ್ಥಿಗಳಿಗೆ, ಅದರಲ್ಲೂ ಗ್ರಾಮೀಣ ಮಕ್ಕಳಿಗೆ, ಮೂಲವಿಜ್ಞಾನ ಮತ್ತು ಸಂಶೋಧನೆಯಲ್ಲಿ ಆಸಕ್ತಿ ಮೂಡುವಂತಾಗಲು ಕೆಲವು ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಕರ್ನಾಟಕ ವಿಜ್ಞಾನ ಪರಿಷತ್ತು ನಿರ್ಧರಿಸಿದೆ. ಈ ಕುರಿತು ಶೀಘ್ರವೇ ನಾವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇವೆ’ ಎಂದರು.
ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ವೈಜ್ಞಾನಿಕ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.