ADVERTISEMENT

ಅಣ್ಣಿಗೇರಿ ತಲೆಬುರುಡೆ ಪ್ರಕರಣ: ಕಾರ್ಬನ್ ಡೇಟಿಂಗ್ ವರದಿಗೆ ತಜ್ಞರ ಅಸಮ್ಮತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2011, 19:30 IST
Last Updated 11 ನವೆಂಬರ್ 2011, 19:30 IST
ಅಣ್ಣಿಗೇರಿ ತಲೆಬುರುಡೆ ಪ್ರಕರಣ: ಕಾರ್ಬನ್ ಡೇಟಿಂಗ್ ವರದಿಗೆ ತಜ್ಞರ ಅಸಮ್ಮತಿ
ಅಣ್ಣಿಗೇರಿ ತಲೆಬುರುಡೆ ಪ್ರಕರಣ: ಕಾರ್ಬನ್ ಡೇಟಿಂಗ್ ವರದಿಗೆ ತಜ್ಞರ ಅಸಮ್ಮತಿ   

ಧಾರವಾಡ:  ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ಸಿಕ್ಕಿರುವ ತಲೆಬುರುಡೆಗಳ ಪ್ರಕರಣ ಇನ್ನೂವರೆಗೂ ಕಗ್ಗಂಟಾಗಿಯೇ ಉಳಿದಿದೆ. ಇತಿಹಾಸಕಾರರು, ಸಂಶೋಧನಾಕಾರರ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ಕಾರ್ಬನ್-14 ಡೇಟಿಂಗ್ ವರದಿ ಬಂದಿರುವುದು ಇದಕ್ಕೆ ಕಾರಣ.

ಅಮೆರಿಕದ ಫ್ಲೋರಿಡಾದ ಮಿಯಾಮಿ ನಗರದ ಬೀಟಾ ಅನಾಲಿಟಿಕ್ ಕಂಪೆನಿಯ ರೇಡಿಯೋ ಕಾರ್ಬನ್ ಲ್ಯಾಬ್ ಈ ಬುರುಡೆಗಳ ಕಾಲಮಾನವನ್ನು ಅಂದಾಜು ಮಾಡಿದ್ದು, 181 (1830ರ ನಂತರ) ವರ್ಷಗಳ ಹಿಂದಿನವು ಎಂದು ವರದಿ ನೀಡಿದೆ. ಈ ಅವಧಿಯಲ್ಲಿ ಯಾವುದೇ ಯುದ್ಧಗಳು ನಡೆದಿಲ್ಲ. ಹಾಗಾಗಿ, ತೀವ್ರ ಬರ ಹಾಗೂ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ ನಡೆದಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಅಮೆರಿಕದ ವರದಿ ಬಗ್ಗೆ ತಜ್ಞರು ಸಮ್ಮತಿ ವ್ಯಕ್ತಪಡಿಸಿಲ್ಲ. ಇಲ್ಲಿನ ಇತಿಹಾಸ, ಸಂಪ್ರದಾಯದ ಮೇಲೆ ಸಂಶೋಧನೆ ನಡೆಸಬೇಕು ಎಂಬುದು ತಜ್ಞರ ಅಭಿಪ್ರಾಯ.

ADVERTISEMENT

2010ರ ಆಗಸ್ಟ್ 28ರಂದು ತೆರೆದ ಗಟಾರು ದುರಸ್ತಿ ಸಮಯದಲ್ಲಿ  ಇಲ್ಲಿ ಸುಮಾರು 600 ತಲೆಬುರುಡೆಗಳು ಪತ್ತೆಯಾಗಿದ್ದವು. ತಲೆಬುರುಡೆಗಳ ಕಾಲಮಾನ ಗೊತ್ತಾಗಲು ಹೈದರಾಬಾದ್‌ನ ಪ್ರಯೋಗಾಲಯಕ್ಕೆಕಳುಹಿಸಲಾಗಿತ್ತು. ಅಲ್ಲಿಯೂ ಕಾಲಮಾನ ಗೊತ್ತಾಗದ ಕಾರಣ ಭುವನೇಶ್ವರದ ಭೌತಶಾಸ್ತ್ರ ಸಂಸ್ಥೆಗೆ (ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್) ಕಳುಹಿಸಲಾಗಿತ್ತು. ಕಳೆದ ಮೇ 9ರಂದು ಭುವನೇಶ್ವರದ ಸಂಸ್ಥೆ ತಲೆಬುರುಡೆಗಳು 638 ವರ್ಷ ಹಿಂದಿನವು ಎಂದು ವರದಿ ನೀಡಿತ್ತು.

ಕೆಲವು ಬುರುಡೆಗಳನ್ನು ಎಸ್‌ಡಿಎಂ ದಂತ ಕಾಲೇಜಿನಲ್ಲೂ ಪರೀಕ್ಷಿಸಲಾಗಿತ್ತು. ಡಾ. ಅಶಿತಾಚಾರ್ಯ ಅವರು ಬುರುಡೆ ಮತ್ತು ಎಲುಬುಗಳಲ್ಲಿ ಆಳವಾದ ಗಾಯಗಳಾಗಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಿದ್ದರು.

`ಮಿಯಾಮಿಯಿಂದ ತಲೆಬುರುಡೆ ಕುರಿತ ವರದಿ ಬಂದಿದ್ದು, ಇದರ ಬಗ್ಗೆ ಅಧ್ಯಯನ ನಡೆಸಲಾಗುವುದು. ಎರಡೂ ವರದಿಯಲ್ಲಿ ಕಾಲಮಾನದ ಅಂತರ ಹೆಚ್ಚಿದೆ. ಆದ್ದರಿಂದ ಮತ್ತೊಮ್ಮೆ ಸಂಶೋಧನೆ ನಡೆಸುವ ಅಗತ್ಯವಿದೆ~ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದರು. `ತಲೆಬರುಡೆಗಳನ್ನು ಸಂರಕ್ಷಿಸಲಾಗುವುದು. ಸಾರ್ವಜನಿಕರು ಸಹ ಈ ಬಗ್ಗೆ ಅಭಿಪ್ರಾಯ ಸಲ್ಲಿಸಬಹುದು.

ಒಂದು ತಿಂಗಳವರೆಗೆ ಅಧ್ಯಯನಕ್ಕೆ ಕಾಲಾವಕಾಶ ನೀಡಲಾಗುವುದು. ನಂತರ ಪ್ರಾಚ್ಯವಸ್ತು ಇಲಾಖೆಯವರ ಸಲಹೆ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಅವರು ತಿಳಿಸಿದರು.

`181 ವರ್ಷಗಳ ಹಿಂದೆ ಯಾವುದೇ ಬರ ಪರಿಸ್ಥಿತಿ ಉಂಟಾದ ಬಗ್ಗೆ ದಾಖಲೆಗಳಿಲ್ಲ. ವಾಮಾಚರಕ್ಕಾಗಿಯೇ ತಲೆಬುರುಡೆಗಳನ್ನು ಸಂಗ್ರಹಿಸಿಟ್ಟಿರಬಹುದು~ ಎಂಬುದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಡಾ. ಆರ್.ಎಂ.ಷಡಕ್ಷರಯ್ಯ ಅವರ ಹೇಳಿಕೆ.

`ಭುವನೇಶ್ವರದ ಸಂಸ್ಥೆಯು ಪರೀಕ್ಷಿಸಿ ವರದಿ ನೀಡಿದ್ದೇ ಸರಿಯಿದೆ. ಅಮೆರಿಕದ ಸಂಸ್ಥೆ ತಲೆಬುರುಡೆಗಳು 181 ವರ್ಷ ಹಿಂದಿನವು ಎಂದು ವರದಿ ನೀಡಿದೆ. ಚೀನಾದಲ್ಲಿ ಸಂಶೋಧನೆ ನಡೆಸಿದರೆ 2000 ವರ್ಷದ ಹಿಂದಿನವು ಎಂದು ವರದಿ ಬರಬಹುದು. ಹೀಗಾಗಿ ಆ ಪ್ರದೇಶದ ಸಾಹಿತ್ಯ, ಇತಿಹಾಸ ಹಾಗೂ ಸಂಪ್ರದಾಯದ  ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿದರೆ ಮಾತ್ರ ಇಂತಹ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಗೊತ್ತಾಗಬಹುದು~ ಎಂದು ಖ್ಯಾತ ಸಂಶೋಧಕ ಹಾಗೂ ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ವರದಿ: ಧಾರವಾಡ ಜಿಲ್ಲೆ ಅಣ್ಣಿಗೇರಿಯ ಅಗಸಿ ಓಣಿಯಲ್ಲಿ ಕಳೆದ ವರ್ಷ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಪತ್ತೆಯಾದ ಬುರುಡೆಗಳು ಭೀಕರ ಕ್ಷಾಮದಿಂದ ಮೃತಪಟ್ಟ ವ್ಯಕ್ತಿಗಳದ್ದಾಗಿದೆ ಎಂದು ಅಮೆರಿಕಾದ ಬೆಟಾ ಅನಾಲಿಟಿಕಲ್ ಇಂಕ್ ಪ್ರಯೋಗಾಲಯ ದೃಢಪಡಿಸಿದೆ.

ಒಂದೇ ಜಾಗದಲ್ಲಿ 600ಕ್ಕೂ ಹೆಚ್ಚು ಬುರುಡೆಗಳು ಪತ್ತೆಯಾಗಿ ಕುತೂಹಲ ಮೂಡಿಸಿದ್ದ ಅಣ್ಣಿಗೇರಿ ಬುರುಡೆ ರಹಸ್ಯ ತಿಳಿಯಲು ಪ್ರಾಚ್ಯವಸ್ತು ಇಲಾಖೆಯು ಬುರುಡೆ ಮಾದರಿಯನ್ನು ಅಮೆರಿಕಾದ ಫ್ಲೋರಿಡಾದ ಬೆಟಾ ಅನಾಲಿಟಿಕಲ್ ಇಂಕ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಮೂರು ಹಂತದಲ್ಲಿ ಪ್ರಯೋಗಕ್ಕೆ ಒಳಪಡಿಸಿದ ಬೆಟಾ, 120 ರಿಂದ 140 ವರ್ಷಗಳಷ್ಟು ಹಳೆಯ ಬುರುಡೆಗಳಾಗಿರಬಹುದು ಎಂದು ವರದಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.