ADVERTISEMENT

ಅತಿ ಎತ್ತರದ ಆಂಜನೇಯ ಮೂರ್ತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ದೇಶದ ಅತಿ ಎತ್ತರದ ಏಕಶಿಲಾ ಹನುಮಾನ್ ಮೂರ್ತಿ
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ದೇಶದ ಅತಿ ಎತ್ತರದ ಏಕಶಿಲಾ ಹನುಮಾನ್ ಮೂರ್ತಿ   

ಮೈಸೂರು: ದೇಶದ ಅತಿ ಎತ್ತರದ ಏಕಶಿಲಾ ಹನುಮಾನ್ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಅಭಿಷೇಕ ನಗರದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಡಿ. 26 ರಂದು ಬೆಳಿಗ್ಗೆ 11.30 ಕ್ಕೆ ನೆರವೇರಲಿದೆ.

ಆಂಧ್ರಪ್ರದೇಶದ ಕಡಪ ಜಿಲ್ಲೆ ಪುಲಿವೆಂದಲಿನ ಮಲ್ಲೆಲ ಗ್ರಾಮದಿಂದ ಏಕಶಿಲೆಯನ್ನು 200 ಚಕ್ರಗಳ ಟ್ರಕ್‌ನಲ್ಲಿ ತರಿಸಿ ಮೂರ್ತಿಯನ್ನು ಕೆತ್ತಲಾಗಿದೆ. ಮುಖ್ಯ ಶಿಲ್ಪಿ ಸುಬ್ರಹ್ಮಣ್ಯಾಚಾರಿ ಸೇರಿದಂತೆ 18 ಶಿಲ್ಪಿಗಳು ಕೆತ್ತನೆ ಮಾಡಿದ್ದಾರೆ. ಸುಮಾರು 200 ಟನ್ ತೂಗುವ ಮೂರ್ತಿಯನ್ನು ಗೋಪುರದ ಮೇಲೆ ನಿಲ್ಲಿಸಲಾಗಿದ್ದು, ಇದರ ಒಟ್ಟು ಎತ್ತರ 70 ಅಡಿಗಳು. ಯೋಜನೆಗೆ ಒಟ್ಟಾರೆ ರೂ.2 ಕೋಟಿ ವೆಚ್ಚವಾಗಿದೆ.

`2003 ನೇ ಸಾಲಿನಲ್ಲಿ ಟ್ರಿನಿಡಾಡ್ ದೇಶದಲ್ಲಿ ಪ್ರತಿಷ್ಠಾಪಿಸಲಾದ 85 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಪಾಶ್ಚಿಮಾತ್ಯ ದೇಶಗಳಲ್ಲೇ ಅತಿ ಎತ್ತರದ ಹಿಂದೂ ದೇವತಾಮೂರ್ತಿಯಾಗಿದೆ. ಈಗ ದೇಶದಲ್ಲಿ ಅದರಲ್ಲೂ ಮೈಸೂರಿನ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಎತ್ತರ ಹನುಮಾನ್ ಮೂರ್ತಿ ಪ್ರತಿಷಾಷ್ಠಪನೆಗೊಳ್ಳುವ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ದೇವಸ್ಥಾನದ ಮೇಲ್ಛಾವಣಿಯಲ್ಲಿ 8 ಆಂಜನೇಯಸ್ವಾಮಿ ವಿಗ್ರಹಗಳನ್ನು ದಿಕ್ಕಿಗೆ  ಒಂದರಂತೆ ಪ್ರತಿಷ್ಠಾಪಿಸಲಾಗಿದೆ. ಡಿ.26 ರಿಂದ ಬೃಹತ್ ಮೂರ್ತಿಯನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು `ಎಂದು ಆಶ್ರಮದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂರ್ತಿ ಪ್ರತಿಷ್ಠಾಪನೆ ದಿನದಂದೇ ಆಶ್ರಮದ ಆವರಣದಲ್ಲಿ ಪಾಲಿಕ್ಲಿನಿಕ್ ಹೊರ ರೋಗಿಗಳ ಆಸ್ಪತ್ರೆ ಸಹ ಉದ್ಘಾಟನೆಯಾಗಲಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಸೇವೆ ಲಭಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.