ಮೈಸೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಅಧ್ಯಯನ ಪೀಠಗಳಿಗೂ ಸರ್ಕಾರ ಸಮಾನ ಅನುದಾನ ಹಾಗೂ ಸ್ಥಾನಮಾನ ನೀಡಬೇಕು ಎಂದು ಮೈಸೂರು ವಿ.ವಿ ಕುವೆಂಪು ಅಧ್ಯಯನ ಕೇಂದ್ರದ ಬಸವ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ರಂಗಾಯಣದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಮತ್ತು ಮೂಢನಂಬಿಕೆಯ ಪ್ರಶ್ನೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಣ್ಯರ ಹೆಸರಿನಲ್ಲಿ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಅಧ್ಯಯನ ಪೀಠಗಳಿವೆ. ಆದರೆ, ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಕೆಲವು ಪೀಠಗಳಿಗೆ ₨ 10 ಲಕ್ಷ ನೀಡಿದರೆ, ಬಲಾಢ್ಯರ ಪೀಠಗಳಿಗೆ ಕೋಟಿಗಟ್ಟಲೆ ಅನುದಾನ ದಕ್ಕುತ್ತದೆ. ಅಲ್ಲದೇ, ಅವರ ಹೆಸರಿನಲ್ಲಿ ಹೆಚ್ಚು ಪೀಠಗಳೂ ಸ್ಥಾಪನೆಯಾಗುತ್ತವೆ. ಈ ತಾರತಮ್ಯವನ್ನು ಸರ್ಕಾರ ನಿಲ್ಲಿಸಬೇಕು. ಕಡಿಮೆ ಅನುದಾನದ ಬಡ್ಡಿಯಲ್ಲಿ ಪೀಠವನ್ನು ಮುನ್ನಡೆಸುವುದು ಕಷ್ಟ ಎಂದರು.
ದೇವಸ್ಥಾನಗಳಿಗೆ ಹೋಗಬಾರದು ಎಂದು ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಹೇಳಿಲ್ಲ. ಕಾಯ್ದೆಯಲ್ಲಿ ಪಟ್ಟಿ ಮಾಡಿರುವ ಕೆಲವು ಆಚರಣೆಗಳನ್ನು ಮೌಢ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ಇದನ್ನು ಕಂದಾಚಾರ ಪ್ರತಿಬಂಧಕ ಕಾಯ್ದೆ ಎಂಬ ಹೆಸರಿನಿಂದ ಕರೆಯುವುದು ಸೂಕ್ತ. ಆಗ ಬಹುತೇಕ ಗೊಂದಲಗಳು ನಿವಾರಣೆಯಾಗುತ್ತವೆ ಎಂದರು.
ರಂಗಾಯಣದ ನಿರ್ದೇಶಕ ಎಚ್. ಜನಾರ್ದನ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ಎನ್. ತಳವಾರ
ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.