ಬೆಂಗಳೂರು: ಕಡಲ ತಡಿಯ ಮಂಗಳೂರಿನ `ಮಾರ್ನಿಂಗ್ ಮಿಸ್ಟ್~ ಹೋಂಸ್ಟೇನಲ್ಲಿ ಜನ್ಮದಿನದ ಸಂಭ್ರಮಾಚರಣೆಯಲ್ಲಿದ್ದ ಯುವಕ-ಯುವತಿಯರ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಡೆಸಿದ ದಾಳಿ ಕುರಿತು ಕಳವಳ... ನಾಲ್ಕು ವರ್ಷಗಳ ಬಿಜೆಪಿ ಸರ್ಕಾರದ ಸಾಧನೆಯ ಮೆಲುಕು... ವ್ಯಕ್ತಿ ಹಿತಕ್ಕಿಂತ ರಾಷ್ಟ್ರಹಿತವೇ ಮುಖ್ಯ ಎಂಬ ಸಂದೇಶ...
ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಮಾಡಿದ ಮೊದಲ ಸ್ವಾತಂತ್ರ್ಯೋತ್ಸವ ಭಾಷಣದ ಪ್ರಮುಖ ಅಂಶಗಳು ಇವು. ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಮೈದಾನದಲ್ಲಿ ಬುಧವಾರ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ನಂತರ ಮುಖ್ಯಮಂತ್ರಿಯವರು ಲಿಖಿತ ಭಾಷಣ ಓದಿದರು.
`ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ಬೆಂಗಳೂರು ಸುತ್ತಮುತ್ತ ಹಾಗೂ ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಅಹಿತಕರ ಘಟನೆಗಳು ಆತಂಕ ಉಂಟುಮಾಡಿವೆ. ಈ ಘಟನೆಗಳಿಗೆ ಕಾರಣರಾದವರನ್ನು ತಕ್ಷಣ ಬಂಧಿಸಿರುವ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇಂಥ ಘಟನೆಗಳು ಮತ್ತೆ ನಡೆಯದಂತೆ ಜಾಗರೂಕತೆ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ~ ಎಂದು ಅವರು ಹೇಳಿದರು.
ಸರ್ಕಾರದ ಪ್ರಯತ್ನದ ಫಲವಾಗಿ ನಕ್ಸಲ್ ಸಮಸ್ಯೆ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದ ಅವರು, `ಅಪರಾಧ ಪ್ರಕರಣಗಳ ಕುರಿತು ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕು, ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರ ಜೊತೆ ಸಹಕರಿಸಬೇಕು~ ಎಂದು ಕೋರಿದರು.
`ಬಿ.ಎಸ್. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಚಾಲನೆ ಪಡೆದುಕೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ವೇಗ ಹೆಚ್ಚಿಸಿ, ಅದರ ಫಲ ರಾಜ್ಯದ ಜನತೆಗೆ ತಲುಪುವಂತೆ ಮಾಡುವ ಜವಾಬ್ದಾರಿಯನ್ನು ನಿರ್ವಂಚನೆಯಿಂದ ನಿರ್ವಹಿಸುತ್ತೇನೆ~ ಎಂಬ ವಾಗ್ದಾನವನ್ನು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ನೀಡಿದರು.
ಎರಡು ವರ್ಷಗಳಿಂದ ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾಗಿವೆ. ಇದರ ಪರಿಣಾಮ 40 ವರ್ಷಗಳಲ್ಲೇ ಕಾಣದ ಭೀಕರ ಬರ ರಾಜ್ಯವನ್ನು ಆವರಿಸಿದೆ. ಕಳೆದ ಎರಡು ವಾರಗಳಿಂದ ಮಳೆ ಬೀಳುತ್ತಿರುವ ಕಾರಣ, ಕೆಲವು ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಿದೆ. ಪರಿಸ್ಥಿತಿ ಸುಧಾರಿಸುವ ಭರವಸೆ ಇದೆ ಎಂದು ಆಶಾಭಾವ ತೋರಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಆರ್ಥಿಕ ತಜ್ಞ ಡಾ.ಡಿ.ಎಂ. ನಂಜುಂಡಪ್ಪ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಜಾರಿಗೊಳಿಸಲಾಗುತ್ತಿದೆ. ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತಂದು, ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸಚಿವ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ಸಮ್ಮತಿ ಸೂಚಿಸಿರುವುದು ಸ್ವಾಗತಾರ್ಹ. ತಿದ್ದುಪಡಿಯನ್ನು ಶೀಘ್ರವೇ ತರಬೇಕು ಎಂಬ ಮನವಿ ಮಾಡಲಾಗುವುದು ಎಂದರು.
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ 79ನೇ ಸ್ಥಾನದಲ್ಲಿದೆ. ಬೆಂಗಳೂರು ನಗರ 16ನೇ ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎರಡು ಕೋಟಿ ಜನರಿಗೆ ಒಂದಲ್ಲ ಒಂದು ಯೋಜನೆಯ ಪ್ರಯೋಜನ ದೊರೆತಿದೆ. ರಾಜ್ಯದ ಹಣಕಾಸು ಸ್ಥಿತಿ ಸುಭದ್ರವಾಗಿದ್ದು, ವಿತ್ತೀಯ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ ಶೇಕಡ 2.94ಕ್ಕೆ ಮಿತಿಗೊಳಿಸಲಾಗಿದೆ ಎಂದರು.
ತೋಟಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ರೂಪಿಸಿರುವ ಬೃಹತ್ ಯೋಜನೆ ಇದೇ ತಿಂಗಳಿನಲ್ಲಿ ಜಾರಿಗೆ ಬರಲಿದೆ. ಪ್ರತಿವರ್ಷ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ತೋಟಗಾರಿಕಾ ಬೆಳೆ ವಿಸ್ತರಿಸಲಾಗುವುದು, ಇದು ವಾರ್ಷಿಕ 450 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ತರುವ ನಿರೀಕ್ಷೆ ಇದೆ ಎಂದು ಹೇಳಿದರು.
ವಿದ್ಯುತ್ ಸಾಗಣೆ ಮತ್ತು ವಿತರಣೆಯಲ್ಲಿ ಆಗುತ್ತಿದ್ದ ನಷ್ಟದ ಪ್ರಮಾಣವನ್ನು ಶೇ 21ಕ್ಕೆ ಇಳಿಸಲಾಗಿದೆ. ಇದನ್ನು ಶೇ 18ಕ್ಕೆ ಇಳಿಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರ ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆ ಮತ್ತು ಸರಬರಾಜು ಕುರಿತು ಭರವಸೆ ನೀಡಿದರೆ, ವಿದ್ಯುತ್ ಸ್ವಾವಲಂಬನೆ ಸಾಧಿಸಲು ರಾಜ್ಯಕ್ಕೆ ಸಾಧ್ಯವಿದೆ ಎಂದರು.
ಕೋಲಾರ - ಚಿಕ್ಕಬಳ್ಳಾಪುರ, ಕಡೂರು - ಚಿಕ್ಕಮಗಳೂರು, ಶ್ರವಣಬೆಳಗೊಳ - ಹಿರಿಸಾವೆ, ನೆಲಮಂಗಲ - ಸೋಲೂರು ರೈಲು ಮಾರ್ಗಗಳು ಮತ್ತು ರಾಮನಗರ - ಮಂಡ್ಯ ನಡುವಿನ ಜೋಡಿ ರೈಲು ಮಾರ್ಗ ನಿರ್ಮಾಣ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಪ್ರಕಟಿಸಿದರು.
ಗೌರವಧನ ಹೆಚ್ಚಳ
ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಗೌರವಧನದ ಪ್ರಮಾಣವನ್ನು ಇದೇ ಜೂನ್‌ನಿಂದ ಅನ್ವಯ ಆಗುವಂತೆ ರೂ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪೋರ್ಚುಗೀಸರ ವಶದಲ್ಲಿದ್ದ ಗೋವಾ ರಾಜ್ಯದ ವಿಮೋಚನೆಗಾಗಿ ಹೋರಾಡಿದ ರಾಜ್ಯದ ಗಣ್ಯರಿಗೆ ರೂ 2 ಸಾವಿರ ಗೌರವಧನ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.