ADVERTISEMENT

ಅಭ್ಯರ್ಥಿಗಳ ಗೋಳಾಟ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕ ಹಾಗೂ ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಇದೇ ಪ್ರಥಮಬಾರಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆದಿದ್ದು, ತಾಂತ್ರಿಕ ದೋಷದಿಂದ ಅಭ್ಯರ್ಥಿಗಳು ಪರದಾಡುವಂತಾಗಿದೆ.

ಸುಮಾರು 800 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಆನ್‌ಲೈನ್ ಮೂಲದವಷ್ಟೇ ಅರ್ಜಿ ಸಲ್ಲಿಸಬೇಕಿದೆ. ಇದೇ 8ನೇ ತಾರೀಖು ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದಿಕ್ಕುಕಾಣದೆ ಕಂಗೆಟ್ಟಿದ್ದಾರೆ. ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಸಹಾಯಕ್ಕೆಂದು ಇರುವ ಸಹಾಯವಾಣಿಯಿಂದ ಕೂಡ ಸಹಾಯ ದೊರಕುತ್ತಿಲ್ಲ ಎನ್ನುವುದು ಅಭ್ಯರ್ಥಿಗಳ ದೂರು.
ಈ ಕುರಿತು ‘ಪ್ರಜಾವಾಣಿ’ಗೆ ಹಲವಾರು ಕರೆಗಳು ಬರುತ್ತಿವೆ. ಈ ತಾಂತ್ರಿಕ ದೋಷವನ್ನು ಸರಿಪಡಿಸಿ, ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಬೇಕು ಎನ್ನುವುದು ಅವರ ಕೋರಿಕೆಯಾಗಿದೆ.

‘ಕಳೆದ ಫೆಬ್ರುವರಿ ತಿಂಗಳಿನಲ್ಲಿಯೇ ಅರ್ಜಿ ಕರೆಯಲಾಗಿದೆ. ಆದರೆ ಈಗಾಗಲೇ ನಾನು ಈಗ ಸರ್ಕಾರಿ ಹುದ್ದೆಯಲ್ಲಿ ಇದ್ದೇನೆ (‘ಇನ್‌ಸರ್ವೀಸ್ ಕ್ಯಾಂಡಿಡೇಟ್). ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಅನುಮತಿ ಪಡೆದು ಅರ್ಜಿ ಸಲ್ಲಿಸಬೇಕು. ಅವರು ನನಗೆ ಅನುಮತಿ ನೀಡಲು 20 ದಿನಗಳಾಗಿವೆ. ಈಗ ಅರ್ಜಿ ಸಲ್ಲಿಸಲು ಹೋದರೆ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಸಲಾಗುತ್ತಿಲ್ಲ. ಈ ಹಿಂದೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿದ್ದೇನೆ. ಆಗ ಇಂತಹ ಸಮಸ್ಯೆ ಇರಲಿಲ್ಲ’ ಎಂದು ಕಾರವಾರದಿಂದ ಪತ್ರಿಕೆಗೆ ಕರೆ ಮಾಡಿದ ಮಹೇಶ್ ತಿಳಿಸಿದರು.

ಇನ್ನು ಹಳ್ಳಿಯಿಂದ ಪಟ್ಟಣಕ್ಕೆ ‘ಇಂಟರ್‌ನೆಟ್’ ಕೇಂದ್ರಗಳನ್ನು ಅರಸಿ ಬರುವ ಅಭ್ಯರ್ಥಿಗಳಿಗಂತೂ ಈ ಸಮಸ್ಯೆ ನುಂಗಲಾರದ ತುಪ್ಪವಾಗಿದೆ. ಗುಲ್ಬರ್ಗ ಜಿಲ್ಲೆಯ ಹಳ್ಳಿಯೊಂದರಿಂದ ಕರೆ ಮಾಡಿದ ರೂಪಾ ಹೇಳಿದ್ದು ಹೀಗೆ, ‘ನಾನು ದಿನಂಪ್ರತಿ 15ಕಿ.ಮೀ ದೂರ ಇರುವ ಗುಲ್ಬರ್ಗಕ್ಕೆ ಅರ್ಜಿ ಸಲ್ಲಿಸಲು ಬರುತ್ತಿದ್ದೇನೆ. ಆದರೆ ತಾಂತ್ರಿಕ ದೋಷದಿಂದ ನನಗೆ ಸಮಸ್ಯೆಯಾಗಿದೆ. ಬಡ ಕುಟುಂಬದವಳಾದ ನನಗೆ ದಿನವೂ ಬಸ್‌ಗೆ ಹಣ ಸುರಿಯುವುದೇ ಕಷ್ಟವಾಗಿದೆ.

ಸಹಾಯವಾಣಿಗೆ ಅನೇಕ ಬಾರಿ ಕರೆ ಮಾಡಿದೆ. ಒಂದು ದಿನ ‘ಲೈನ್’ ಸಿಕ್ಕಿತು. ಆದರೆ ನನ್ನ ಅಸಹಾಯಕತೆ ಅವರಲ್ಲಿ ಹೇಳಿದಾಗ, ‘ಇನ್ನೊಮ್ಮೆ ಪ್ರಯತ್ನ ಮಾಡಿ. ಅರ್ಜಿ ಓಪನ್ ಆಗುತ್ತದೆ’ ಎಂಬ ಉತ್ತರ ಬಂತೇ ವಿನಾ ಸಮಸ್ಯೆಗೆ ಉತ್ತರ ದೊರಕಲಿಲ್ಲ’ ಎಂದರು. ಸಮಸ್ಯೆ ಕುರಿತು ಪರಿಶೀಲಿಸಲು ಭಾನುವಾರ ಪತ್ರಿಕೆ ಹಲವಾರು ಬಾರಿ ಪ್ರಯತ್ನಿಸಿದರೂ ತಾಂತ್ರಿಕ ದೋಷದ ಸಂದೇಶ ಬಂತು. ಸಹಾಯವಾಣಿ ಕೂಡ ಸತತವಾಗಿ ಕಾರ್ಯನಿರತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.