ADVERTISEMENT

ಅಶಿಸ್ತು ಸಹಿಸಿಕೊಳ್ಳಲಾಗದು: ಸಿದ್ದರಾಮಯ್ಯ ಎಚ್ಚರಿಕೆ

ವಿಧಾನಸಭೆಯಲ್ಲಿ ಸಂಖ್ಯೆ ಕಡಿಮೆಯಾದರೂ ಚಿಂತಿಸದೆ ಕ್ರಮ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 20:00 IST
Last Updated 9 ಫೆಬ್ರುವರಿ 2019, 20:00 IST
   

ನವದೆಹಲಿ: ‘ವಿಧಾನಸಭೆಯಲ್ಲಿ ನಮ್ಮ ಸಂಖ್ಯೆ ಕಡಿಮೆಯಾದರೂ ಚಿಂತಿಸದೇ ಅಶಿಸ್ತು ಪ್ರದರ್ಶಿಸುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರ ಇಲ್ಲಿ ಏರ್ಪಡಿಸಿದ್ದ ವಿವಿಧ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಮ್ಮದು ಶಿಸ್ತಿನ ಪಕ್ಷ. ಅಶಿಸ್ತನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಜೊತೆ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕಾಂಗ ಸಭೆಗೆ ಗೈರುಹಾಜರಾಗಿರುವ ರಮೇಶ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ ಕುಮಠಳ್ಳಿ ಹಾಗೂ ಉಮೇಶ ಜಾಧವ್‌ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸುವಂತೆ ಸೋಮವಾರದೊಳಗೆ ಸ್ಪೀಕರ್‌ಗೆ ದೂರು ಸಲ್ಲಿಸಲಾಗುವುದು’ ಎಂದು ಅವರು ಹೇಳಿದರು.

ADVERTISEMENT

‘ಷೋಕಾಸ್‌ ನೋಟಿಸ್‌ ನೀಡಿದರೂ ತಿದ್ದಿಕೊಳ್ಳದವರನ್ನು ಸಹಿಸಿಕೊಳ್ಳಲು ಆಗದು. ಆದರೆ, ರೆಸಾರ್ಟ್‌ನಲ್ಲಿ ಆನಂದ್‌ಸಿಂಗ್‌ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಹಾಗೂ ಅಸಮಾಧಾನ ವ್ಯಕ್ತಪಡಿಸಿರುವ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಅಂಬರೀಷ್ ಅವರ ಪತ್ನಿ ಸುಮಲತಾ ಅವರು ರಾಜಕೀಯಕ್ಕೆ ಬರಲಿ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿ ಎಂಬುದು ಕಾರ್ಯಕರ್ತರ ಮತ್ತು ಅಭಿಮಾನಿಗಳ ಕೋರಿಕೆಯಾಗಿದೆ. ಅವರಿಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿಲ್ಲ ಎಂದು ಅವರು ವಿವರಿಸಿದರು.

‘ರಾಜ್ಯದಲ್ಲಿ ಇದೇ 23ರಿಂದ ಪಕ್ಷವು ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಲಿದೆ. ರಾಷ್ಟ್ರೀಯ ಮುಖಂಡರು ಪ್ರಚಾರ ಕೈಗೊಳ್ಳಲಿದ್ದು, ಎಲ್ಲ ಜಿಲ್ಲೆಗಳಲ್ಲೂ ಸಮಾವೇಶಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

ಜೆಡಿಎಸ್‌ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಬಿ.ಎಸ್‌. ಯಡಿಯೂರಪ್ಪ ಆಮಿಷ ಒಡ್ಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಏನಿದೆ ಎಂಬುದು ಗೊತ್ತಿಲ್ಲ ಎಂದರು.

‘ಮೋದಿ, ಶಾ ನೇರ ಪಾತ್ರ’

ಜೆಡಿಎಸ್‌– ಕಾಂಗ್ರೆಸ್‌ ಶಾಸಕರಿಗೆ ಆಮಿಷ ಒಡ್ಡಿರುವ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ನೇರ ಪಾತ್ರ ಇದೆ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲಾ ಆರೋಪಿಸಿದರು. ಎಐಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ದೂರಿದ ಅವರು, ಕಾಂಗ್ರೆಸ್‌ನ 18 ಜನ ಶಾಸಕರಿಗೆ ಯಡಿಯೂರಪ್ಪ ಅವರು ₹ 200 ಕೋಟಿಗೂ ಅಧಿಕ ಮೊತ್ತದ ಆಮಿಷ ಒಡ್ಡಿದ್ದಾರೆ‘ ಎಂದರು.

ಕೆಲವು ಶಾಸಕರಿಗೆ ಸಚಿವ ಸ್ಥಾನ, ಇನ್ನು ಕೆಲವರಿಗೆ ನಿಗಮ– ಮಂಡಳಿ ಅಧ್ಯಕ್ಷ ಸ್ಥಾನದ ಆಮಿಷ ಒಡ್ಡಲಾಗಿದೆ. ನಂತರ ನಡೆಯುವ ಉಪ ಚುನಾವಣೆಯ ಸಂಪೂರ್ಣ ವೆಚ್ಚ ಭರಿಸಿ ಗೆಲ್ಲಿಸುವುದಾಗಿ ಭರವಸೆ ನೀಡಲಾಗಿದೆ. ಈ ಬೆಳವಣಿಗೆಯನ್ನು ಪ್ರಶ್ನಿಸಿ ಒಂದೊಮ್ಮೆ ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದಲ್ಲಿ, ನ್ಯಾಯಮೂರ್ತಿಗಳನ್ನೂ ‘ಬುಟ್ಟಿಗೆ’ ಹಾಕಿಕೊಳ್ಳಲಾಗುತ್ತದೆ ಎಂಬ ಅಂಶವೂ ಶುಕ್ರವಾರ ಎಚ್‌.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೊದಲ್ಲಿದೆ. ಸುಪ್ರೀಂ ಕೋರ್ಟ್‌ ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.