ADVERTISEMENT

ಆದೇಶದಲ್ಲೇ ಉಳಿದ ಎಲೆಕ್ಟ್ರಾನಿಕ್ ತೂಕ ಯಂತ್ರ

ಚಂದ್ರಹಾಸ ಹಿರೇಮಳಲಿ
Published 4 ನವೆಂಬರ್ 2011, 19:30 IST
Last Updated 4 ನವೆಂಬರ್ 2011, 19:30 IST
ಆದೇಶದಲ್ಲೇ ಉಳಿದ ಎಲೆಕ್ಟ್ರಾನಿಕ್ ತೂಕ ಯಂತ್ರ
ಆದೇಶದಲ್ಲೇ ಉಳಿದ ಎಲೆಕ್ಟ್ರಾನಿಕ್ ತೂಕ ಯಂತ್ರ   

ದಾವಣಗೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಡೆಯುವ ತೂಕದಲ್ಲಿನ ಮೋಸಕ್ಕೆ ಕಡಿವಾಣ ಹಾಕಲು ಸರ್ಕಾರ ಜಾರಿಗೊಳಿಸಿದ `ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಕೆ ಆದೇಶ ಮೂರು ವರ್ಷಗಳಾದರೂ ರಾಜ್ಯದ ಬಹುತೇಕ ಮಾರುಕಟ್ಟೆಗಳಲ್ಲಿ ಜಾರಿಯಾಗಿಲ್ಲ.

ರಾಜ್ಯದಲ್ಲಿ ಎಪಿಎಂಸಿ ಮಾರುಕಟ್ಟೆಗಳು ಆರಂಭವಾಗಿ 6 ದಶಕ ಕಳೆದರೂ ರೈತರಿಂದ ದವಸ-ಧಾನ್ಯ ಮತ್ತಿತರ ಬೆಳೆ ಖರೀದಿಸುವಾಗ ದಲಾಲರು ಸಾಂಪ್ರದಾಯಿಕ ತೂಕದ ಸಾಧನ `ಕಾಟಾ~ವನ್ನೇ ಬಳಸುತ್ತಾ ಬರುತ್ತಿದ್ದರು. `ಪ್ರತಿ ಕ್ವಿಂಟಲ್‌ಗೆ 3-5 ಕೆ.ಜಿ. ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.
ಅದನ್ನು ತಡೆಯಬೇಕು~ ಎಂಬ ರೈತರು ಹಾಗೂ ರೈತ ಸಂಘಟನೆಗಳ ಒತ್ತಾಯಕ್ಕೆ ಮಣಿದ ಕೃಷಿ ಮಾರುಕಟ್ಟೆ ಇಲಾಖೆಯು ರಾಜ್ಯದ ಎಪಿಎಂಸಿಗಳಲ್ಲಿ ಪರವಾನಗಿ ಪಡೆದು ವ್ಯಾಪಾರ-ವಹಿವಾಟು ನಡೆಸುತ್ತಿರುವ ದಲಾಲರು ಕಡ್ಡಾಯವಾಗಿ `ಎಲೆಕ್ಟ್ರಾನಿಕ್ ತೂಕದ ಯಂತ್ರ~ ಅಳವಡಿಸಿಕೊಳ್ಳುವಂತೆ ಆದೇಶ ಮಾಡಿತ್ತು.

ರಾಜ್ಯದಲ್ಲಿ 152 ಕೃಷಿ ಉತ್ಪನ್ನ ಮಾರುಕಟ್ಟೆಗಳಿದ್ದು, ಸರ್ಕಾರದ ಹೊಸ ಆದೇಶದ ನಂತರ ಬೆಂಗಳೂರಿನ ಯಶವಂತಪುರ ಎಪಿಎಂಸಿ, ಶಿವಮೊಗ್ಗ, ಮೈಸೂರು, ಚಿತ್ರದುರ್ಗ, ಗದಗ ಸೇರಿದಂತೆ ಕೆಲ ಎಪಿಎಂಸಿ ದಲಾಲರು ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ, ರಾಜ್ಯದ ಅತ್ಯಂತ ಪ್ರಮುಖ ಮಾರುಕಟ್ಟೆಯಾದ ದಾವಣಗೆರೆ ಸೇರಿದಂತೆ ಹಲವೆಡೆ ಹಳೆಯ ಕಾಟಾದ ಮೂಲಕವೇ ವಹಿವಾಟು ನಡೆಸಲಾಗುತ್ತಿದೆ.

`ಹಳೆಯ ತೂಕದ ಯಂತ್ರಗಳಲ್ಲಿ ವಂಚನೆ ಮಾಡಲು ಸಾಕಷ್ಟು ಅವಕಾಶ ಇದ್ದು, ಅದನ್ನು ತಡೆಯುವ ಉದ್ದೇಶದಿಂದಲೇ ಹೊಸ ಆದೇಶ ಹೊರಡಿಸಿದರೂ, ಅದಕ್ಕೆ ಮನ್ನಣೆ ನೀಡದ ಹಮಾಲರು ರೈತ ವಿರೋಧಿ ನಿಲುವನ್ನೇ ಮುಂದುವರಿಸಿದ್ದಾರೆ. ಎಲೆಕ್ಟ್ರಾನಿಕ್ ಯಂತ್ರ ಅಳವಡಿಸಿಕೊಳ್ಳದ ದಲಾಲರ ಪರವಾನಗಿ ರದ್ದು ಮಾಡುವ ಅಧಿಕಾರ ಸ್ಥಳೀಯ ಎಪಿಎಂಸಿ ಆಡಳಿತಕ್ಕೆ ಇದ್ದರೂ, ಲಾಬಿಗೆ ಮಣಿದು, ಆದೇಶ ಕಾರ್ಯಗತಗೊಳಿಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ~ ಎಂದು ರೈತ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಆರೋಪಿಸುತ್ತಾರೆ.

ರಾಜ್ಯದ ಬಹುತೇಕ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ನೆಲಹಾಸು ಸರಿ ಇಲ್ಲ. ಗುಂಡಿಬಿದ್ದ ಅಂಗಳದಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳನ್ನು ಇಟ್ಟು ತೂಕ ಮಾಡುವುದು ಕಷ್ಟ. ಅಲ್ಲದೇ, ಶೇ. 50ಕ್ಕಿಂತ ಹೆಚ್ಚು ಬೆಳೆಯನ್ನು ರೈತರು ಹೊಲಗಳಲ್ಲೇ ಮಾರಾಟ ಮಾಡುತ್ತಾರೆ. ಅಲ್ಲಿಗೆ ಅವುಗಳನ್ನು ತೆಗೆದುಕೊಂಡು ಹೋದರೆ ಬೇಗ ಹಾಳಾಗುತ್ತವೆ. ಹತ್ತಿ ಅಂಡಿಗೆ ತೂಕ ಮಾಡಲು ಸಾಧ್ಯವಿಲ್ಲ. ಎಲ್ಲ ರೀತಿಯ ಬೆಳೆ ಖರೀದಿಸುವ ವ್ಯಾಪಾರಿಗಳು ಎರಡೂ ನಮೂನೆ ತೂಕದ ಯಂತ್ರ ಇಟ್ಟುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ದಲಾಲರ ಸಂಘದ ಅಧ್ಯಕ್ಷ ಕುಸುಮ ಶೆಟ್ಟಿ.

`ರಾಜ್ಯದ 152 ಮಾರುಕಟ್ಟೆಗಳಲ್ಲಿ 36,943 ಮಂದಿ ಪರವಾನಗಿ ಹೊಂದಿದ ವ್ಯಾಪಾರಸ್ಥರು ಇದ್ದಾರೆ. ಅವರಲ್ಲಿ 21,607 ಮಂದಿ ವ್ಯಾಪಾರಿಗಳು `ಎಲೆಕ್ಟ್ರಾನಿಕ್ ತೂಕದ ಯಂತ್ರ~ ಖರೀದಿಸಿದ್ದಾರೆ. ಇನ್ನೂ 15,336 ಮಂದಿ ಖರೀದಿಸಬೇಕಿದೆ. ಕೆಲವರಿಗೆ ಮೂಲ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ರಿಯಾಯಿತಿ ನೀಡಲಾಗಿದೆ. ಉಳಿದವರ ಮನವೊಲಿಸಲಾಗುತ್ತಿದೆ~ ಎನ್ನುತ್ತಾರೆ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರ ಕಚೇರಿಯ ಅಳತೆ ಮತ್ತು ತೂಕ ವಿಭಾಗದ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.