ADVERTISEMENT

ಆಮ್ನೆಸ್ಟಿ ಪದಾಧಿಕಾರಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 19:34 IST
Last Updated 18 ಆಗಸ್ಟ್ 2016, 19:34 IST
ಆಮ್ನೆಸ್ಟಿ ಪದಾಧಿಕಾರಿಗಳ ವಿಚಾರಣೆ
ಆಮ್ನೆಸ್ಟಿ ಪದಾಧಿಕಾರಿಗಳ ವಿಚಾರಣೆ   

ಬೆಂಗಳೂರು: ‘ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದ’ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಹನ್ನೊಂದು ಮಂದಿಯನ್ನು ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿದರು.

ಕಾರ್ಯಕ್ರಮ ನಡೆದಿದ್ದ ಮಿಲ್ಲರ್‌ ರಸ್ತೆಯ ಥಿಯಾಲಾಜಿಕಲ್‌ ಕಾಲೇಜಿನ ವ್ಯವಸ್ಥಾಪಕ, ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆಯ ನಾಲ್ವರು ಪದಾಧಿಕಾರಿಗಳು, ಕಾರ್ಯಕ್ರಮ ಚಿತ್ರೀಕರಿಸಿದ್ದ ಮೂವರು ವಿಡಿಯೊಗ್ರಾಫರ್‌ಗಳು ಹಾಗೂ ಮೂವರು ಪ್ರೇಕ್ಷಕರ ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

‘ದೂರು ಹಾಗೂ ಕೆಲ ಪ್ರತ್ಯಕ್ಷದರ್ಶಿಗಳ ಮಾಹಿತಿ ಮೇರೆಗೆ ಹನ್ನೊಂದು ಮಂದಿಗೆ ವಿಚಾರಣೆಗೆ ಹಾಜರಾಗುಂತೆ ನೋಟಿಸ್‌ ನೀಡಲಾಗಿತ್ತು.  ಎಲ್ಲರೂ ಬಂದು, ತನಿಖಾ ತಂಡದವರ  ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ’  ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕೆ.ಎಸ್.ಆರ್‌. ಚರಣ್‌ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಚಾರಣೆಗೆ ಹಾಜರಾದವರ ಹೆಸರು ಬಹಿರಂಗಪಡಿಸಲು ನಿರಾಕರಿಸಿದ ಚರಣ್‌ರೆಡ್ಡಿ, ‘ಪ್ರಕರಣ ಸಂಬಂಧ ಶುಕ್ರವಾರ (ಆಗಸ್ಟ್‌ 19) ಇನ್ನೂ ಹಲವರ ವಿಚಾರಣೆ ನಡೆಸಬೇಕಿದೆ’ ಎಂದರು. 

‘ಬ್ರೋಕನ್‌ ಫ್ಯಾಮಿಲೀಸ್‌’ ಕಾರ್ಯಕ್ರಮದ ಸ್ವರೂಪ, ಉದ್ದೇಶ ಹಾಗೂ ಗುರಿ ಬಗ್ಗೆಯೂ ತನಿಖಾಧಿಕಾರಿಗಳು ಹೆಚ್ಚಿನ ಪ್ರಶ್ನೆಗಳನ್ನು ಕೇಳಿರುವುದಾಗಿ ಗೊತ್ತಾದೆ. ಜತೆಗೆ ‘ಅಂದು ಕಾರ್ಯಕ್ರಮದಲ್ಲಿ ಯಾರ್‌್ಯಾರು ಮಾತನಾಡಿದ್ದಾರೆ. ಅವರ ಹಾಗೂ ಅವರ ಮಾತುಗಳನ್ನು ಚಿತ್ರೀಕರಿಸಿದ್ದೀರಾ’ ಎಂಬ ಪ್ರಶ್ನೆಗಳಿಗೆ ಲಿಖಿತವಾಗಿಯೇ ವಿಡಿಯೊಗ್ರಾಫರ್‌ಗಳು ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಾಗಿದೆ.

ಬಾಡಿಗೆ ಕೊಟ್ಟಿದ್ದೆವಷ್ಟೇ: ತನಿಖಾಧಿಕಾರಿಗಳಿಗೆ ಹೇಳಿಕೆ ನೀಡಿರುವ ಥಿಯಾಲಾಜಿಕಲ್‌ ಕಾಲೇಜಿನ ವ್ಯವಸ್ಥಾಪಕ, ‘ನಮಗೂ ಈ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಸಭಾಂಗಣವನ್ನು ಬಾಡಿಗೆ ಕೊಟ್ಟಿದ್ದೆವಷ್ಟೇ’ ಎಂದಿರುವುದಾಗಿ  ಗೊತ್ತಾಗಿದೆ.

ಪ್ರತಿಭಟನೆ ಬಿಸಿ: ಕಚೇರಿಗೆ ಬೀಗ!
ಎಬಿವಿಪಿ ಪ್ರತಿಭಟನೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಸೂಚನೆ ಮೇರೆಗೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆಯ ಇಂದಿರಾನಗರದ 13ನೇ ಕ್ರಾಸ್‌ನಲ್ಲಿರುವ ಕಚೇರಿಗೆ ಬೀಗ ಹಾಕಲಾಗಿದೆ.

‘ಪ್ರಕರಣ ಸೂಕ್ಷ್ಮವಾಗಿರುವುದರಿಂದ ಪ್ರತಿಭಟನಾನಿರತರು ಕಚೇರಿ ಮೇಲೆ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಮಾಹಿತಿ ಬಂದಿತ್ತು. ಹೀಗಾಗಿ ಕಚೇರಿ ಬಂದ್‌ ಮಾಡುವಂತೆ ಹೇಳಿದ್ದೆವು. ಜತೆಗೆ ಕಚೇರಿ ಬಳಿ ಭದ್ರತೆಗೆ ಸಿಬ್ಬಂದಿ  ನಿಯೋಜಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪರಿಸ್ಥಿತಿ ಶಾಂತವಾಗುವವರೆಗೂ ಕಚೇರಿ ತೆರೆಯುವುದಿಲ್ಲ. ಮನೆಯಿಂದಲೇ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದ್ದೇವೆ  ಎಂದು
ಸಂಸ್ಥೆಯ ಸದಸ್ಯರೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT