ADVERTISEMENT

ಆಯ ತಪ್ಪಿದರೆ ಅಪಾಯ ನಿಶ್ಚಿತ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2010, 7:05 IST
Last Updated 27 ಡಿಸೆಂಬರ್ 2010, 7:05 IST
ಆಯ ತಪ್ಪಿದರೆ ಅಪಾಯ ನಿಶ್ಚಿತ
ಆಯ ತಪ್ಪಿದರೆ ಅಪಾಯ ನಿಶ್ಚಿತ   

ಪ್ರಕಾಶ ಕುಗ್ವೆ
ಶಿವಮೊಗ್ಗ: ಒಂದು ಪಕ್ಕ ಆಳವಾದ ಕೆರೆ, ಇನ್ನೊಂದು ಪಕ್ಕ ಕಡಿದಾದ ಕಂದಕ. ಇವೆರಡರ ಮಧ್ಯೆ ಅರ್ಧ ಕಿ.ಮೀ. ಉದ್ದದ ಕಿರಿದಾದ ಕೆರೆ ದಂಡೆ.ನಗರದಿಂದ 5 ಕಿ.ಮೀ. ದೂರದ ಸುಮಾರು 40 ಎಕರೆ ಪ್ರದೇಶದಲ್ಲಿ ಹಬ್ಬಿರುವ ಪುರಲೆ ಕೆರೆಯ ದೃಶ್ಯವಿದು. ಈ ಕೆರೆ ನಿತ್ಯ ಅಪಾಯವನ್ನು ಆಹ್ವಾನಿಸುತ್ತಲೇ ಇದೆ.ಪುರಲೆ ಗ್ರಾಮದ ಅಂಚಿನಲ್ಲಿರುವ ಈ ಕೆರೆ 10ಕ್ಕೂ ಹೆಚ್ಚು ಅಡಿ ಆಳವಿದೆ. ದಂಡೆ ಪಕ್ಕದಲ್ಲಿ ಜೀವ ತೆಗೆಯುವ ನೂರಾರು ಕಂದಕಗಳು; ಅರ್ಧ ಕಿ.ಮೀ. ಉದ್ದದ ರಸ್ತೆಯಲ್ಲಿ ಹತ್ತಾರು ಅಂಕು-ಡೊಂಕುಗಳಿವೆ. ಕೆರೆ ದಂಡೆ ರಸ್ತೆಯ ಅಗಲ ಕೇವಲ 10 ಅಡಿ ಇರುವುದರಿಂದ ಭಾರೀ ವಾಹನಗಳು ಎದುರಾದಲ್ಲಿ ಸಣ್ಣಪುಟ್ಟ ವಾಹನಗಳು ಕೆರೆಗೆ ಉರುಳುವ ಸಂಭವವೇ ಹೆಚ್ಚು.

ಚಿತ್ರದುರ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 13ರಲ್ಲಿರುವ ಈ ಕೆರೆ ದಂಡೆಯಲ್ಲಿ ದಿನದ 24ಗಂಟೆಯೂ ಸಂಚಾರ ದಟ್ಟಣೆ. ಪೆಟ್ರೋಲ್ ಟ್ಯಾಂಕರ್ ಹೊತ್ತ ದೊಡ್ಡ ದೊಡ್ಡ ಲಾರಿಗಳು, ವಿಮಾನ ವೇಗದಲ್ಲಿ ಸಾಗುವ ಬಸ್‌ಗಳು, ಗುಂಡಿಗಳನ್ನೇ ಹಾರಿಸಿ ಮುನ್ನುಗ್ಗುವ ಟ್ಯಾಕ್ಸಿಗಳು, ರಸ್ತೆ ಉಬ್ಬುಗಳನ್ನು ಲೆಕ್ಕಿಸದ ದ್ವಿಚಕ್ರ ವಾಹನಗಳು ಇಲ್ಲಿ ಎರ್ರಾಬಿರ್ರಿಯಾಗಿ ಸಂಚರಿಸುತ್ತಲೇ ಇರುತ್ತವೆ.

ಹಾಗಾಗಿ, ಇಲ್ಲಿ ವಾರಕ್ಕೊಂದು ಅಪಘಾತ ಖಚಿತ. 15 ದಿವಸಕ್ಕೊಮ್ಮೆ ವಾಹನಗಳು ಕೆರೆ ಪಾಲಾಗುವುದು ನಿಶ್ಚಿತ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕೆರೆಗೆ ನುಗ್ಗಿದ ಟ್ರ್ಯಾಕ್ಟರ್, ಟಿಲ್ಲರ್, ಲಾರಿ, ಟೆಂಪೋ, ಬಸ್‌ಗಳಿಗೆ ಲೆಕ್ಕವೇ ಇಲ್ಲ. ಸಾವು-ನೋವುಗಳಿಗೆ ಲೆಕ್ಕ ಸಿಕ್ಕಿಲ್ಲ. ಕೆರೆ ಆಸುಪಾಸು ಕೃಷಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ಕೃಷಿಕರು, ಜಾನುವಾರುಗಳ ಸಂಚಾರ ದುಸ್ತರ.

ಕೆಲ ದಿನಗಳ ಹಿಂದಷ್ಟೇ ಕೆರೆ ದಂಡೆಯಲ್ಲಿ ನಡೆದ ಅಪಘಾತದಲ್ಲಿ ದ್ವಿಚಕ್ರ ಸಾವರರೊಬ್ಬರು ಮೃತಪಟ್ಟಿದ್ದರು.ಕೇವಲ ಒಂದು ತಿಂಗಳ ಹಿಂದೆ ಕಾರೊಂದು ಉರುಳಿ ಮೂವರು ಬದುಕುಳಿದಿದ್ದೇ ಆಶ್ಚರ್ಯ.ಕೆರೆ, ಸೇತುವೆಗಳ ಬಳಿ ರಕ್ಷಣೆಗಾಗಿ ತಡೆಗೋಡೆ ಅಥವಾ ತಂತಿಬೇಲಿ ನಿರ್ಮಿಸಬೇಕು ಎಂಬುದು ಹೆದ್ದಾರಿಯ ನಿಯಮ. ಆದರೆ, ಈ ಕೆರೆ ಸುತ್ತ ಮೊಣಕಾಲು ಮಟ್ಟದ ಸಿಮೆಂಟ್ ಕಂಬಗಳನ್ನು ನೆಡಲಾಗಿದೆ. ಅದರಲ್ಲಿ ಈಗಾಗಲೇ ಹಲವು ನೆಲಕ್ಕೆ ಉರುಳಿವೆ. ವಿಚಿತ್ರ ಎಂದರೆ ಇತ್ತೀಚೆಗೆ ನಡೆದ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಕೆರೆ ದಂಡೆ ರಸ್ತೆಯನ್ನು ಇನ್ನಷ್ಟು ಚಿಕ್ಕದು ಮಾಡಲಾಗಿದೆ. ರಸ್ತೆ ವಿಸ್ತರಣೆ ಬದಲಿಗೆ ಇಲ್ಲಿನ ರಸ್ತೆಯನ್ನು ಕುಗ್ಗಿಸಿದ್ದು ಲೋಕೋಪಯೋಗಿ ಇಲಾಖೆ ಸಾಧನೆ!

ಸಾರಿಗೆ ಪ್ರಾದೇಶಿಕ ಅಧಿಕಾರಿಗಳು ಈ ಮಾರ್ಗದಲ್ಲಿ ಕೇವಲ 3 ನಿಮಿಷಕ್ಕೊಂದು ಬಸ್‌ಗೆ ಮಾರ್ಗ ಸೂಚಿಸಿದ್ದಾರೆ. ಒಂದು ಬಸ್ ಮತ್ತೊಂದನ್ನು ಹಿಂದಿಕ್ಕುವ ಭರದಲ್ಲಿ ರಸ್ತೆ ನಿಯಮ ಉಲ್ಲಂಘನೆಯಾಗುತ್ತಿದೆ. ಹಲವು ತಿರುವು-ಮುರುವುಗಳಿರುವ ಕೆರೆ ದಂಡೆ ರಸ್ತೆಯನ್ನು ನೇರಗೊಳಿಸಬೇಕು. ಕಿರಿದಾದ ರಸ್ತೆಗಳನ್ನು ಅಗಲಗೊಳಿಸಬೇಕು. ಹಿಂದೆ ಈ ಕೆರೆ ದಂಡೆ ರಸ್ತೆ ಅಭಿವೃದ್ಧಿಗೊಳಿಸುವ ಬಗ್ಗೆ ಶಾಸಕ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದರು.

 ಆದರೆ, ಅದು ಇದುವರೆಗೂ ಈಡೇರಿಲ್ಲ. ಸರ್ಕಾರ, ಈ ಕೆರೆ ಒಳಾಂಗಣ ಅಭಿವೃದ್ಧಿಗೆ ರೂ 50 ಲಕ್ಷ ಬಿಡುಗಡೆ ಮಾಡಿ ಬಹಳ ದಿವಸಗಳಾಗಿವೆ. ಆದರೆ, ಜಿಲ್ಲಾಡಳಿತ ಇದುವರೆಗೂ ಆ ಕಾಮಗಾರಿ ಕೈಗೊಂಡಿಲ್ಲ ಎಂಬ ಬೇಸರ ಪುರಲೆ ಗ್ರಾಮಸ್ಥ ಪರಮೇಶ್ವರ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.