ADVERTISEMENT

ಆರೋಗ್ಯ ಇಲಾಖೆ ಅಧಿಕಾರಿ ಬಂಧನ

ಅನುಕಂಪದ ನೌಕರಿಗೆ ಲಂಚ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 20:12 IST
Last Updated 19 ಡಿಸೆಂಬರ್ 2013, 20:12 IST

ಬೆಂಗಳೂರು: ಸೇವೆಯಲ್ಲಿರುವಾಗಲೇ ಮೃತಪಟ್ಟ ತಮ್ಮದೇ ಇಲಾಖೆಯ ನೌಕರನ ಸಹೋದರನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಚುರುಕುಗೊಳಿಸಲು ರೂ 20 ಸಾವಿರ ಲಂಚ ಪಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಧೀಕ್ಷಕ ನಾರಾಯಣ ಗೌಡ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಹಾಸನದ ನಾಗೇಂದ್ರಕುಮಾರ್‌ ಎಂಬುವರು ಆರೋಗ್ಯ ಇಲಾಖೆಯ ನೌಕರರಾಗಿದ್ದು, ಸೇವೆ ಯಲ್ಲಿರುವಾಗಲೇ ಮೃತಪಟ್ಟಿದ್ದರು. ಅವರಿಗೆ ವಿವಾಹ ಆಗಿರದ ಕಾರಣದಿಂದ ಸಹೋದರ ಎಸ್‌. ಕಿರಣಕುಮಾರ್‌ ಅವರಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕ್ರಿಯೆಗೆ ಸಂಬಂಧಿಸಿದ ಕಡತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಧೀಕ್ಷಕ ನಾರಾಯಣ ಗೌಡ ಅವರ ಬಳಿ ಇತ್ತು.

ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದ ಕಡತವನ್ನು ತ್ವರಿತವಾಗಿ ಮುಂದಕ್ಕೆ ಕಳಿಸುವಂತೆ ಕಿರಣಕುಮಾರ್‌ ಅವರು ನಾರಾಯಣ ಗೌಡ ಅವರಿಗೆ ಮನವಿ ಮಾಡಿದ್ದರು. ಆದರೆ, ಪ್ರಕ್ರಿಯೆ ಚುರುಕುಗೊಳಿಸಲು ₨ 30 ಸಾವಿರ ಲಂಚ ನೀಡುವಂತೆ ಅಧೀಕ್ಷಕರು ಒತ್ತಾಯಿಸಿದ್ದರು.

ಬಳಿಕ ಮತ್ತೆ ಭೇಟಿಯಾಗಿ ಮಾತುಕತೆ ನಡೆಸಿ ದಾಗ,ರೂ 20 ಸಾವಿರ ನೀಡದಿದ್ದರೆ ಕಡತ ಮುಂದಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದ್ದರು. ಬುಧವಾರವೇ ಹಣದೊಂದಿಗೆ ಬರುವಂತೆಯೂ ನಾರಾಯಣ ಗೌಡ ತಾಕೀತು ಮಾಡಿದ್ದರು. ಕಿರಣಕುಮಾರ್‌ ಅವರ ಭಾವ ಜಿ.ವಿಜಯಕುಮಾರ್‌ ಅವರು ಈ ಕುರಿತು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

‘ಗುರುವಾರ ಸಂಜೆ ಆನಂದರಾವ್‌ ವೃತ್ತದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಕಚೇರಿಗೆ ಹೋದ ವಿಜಯ ಕುಮಾರ್‌ ಅವರು ಹಣ ತಂದಿರುವುದಾಗಿ ಹೇಳಿದರು. ಕಚೇರಿಯ ಆವರಣದಲ್ಲಿರುವ ವಾಹನ ನಿಲುಗಡೆ ಸ್ಥಳಕ್ಕೆ ಬಂದ ನಾರಾಯಣ ಗೌಡ ರೂ 20 ಸಾವಿರ ಪಡೆದುಕೊಂಡರು. ತಕ್ಷಣ ದಾಳಿ ಮಾಡಿದ ಲೋಕಾ ಯುಕ್ತ ಪೊಲೀಸ್‌ ಅಧಿಕಾರಿಗಳ ತಂಡ ಆರೋಪಿ ಯನ್ನು ಬಂಧಿಸಿತು’ ಎಂದು ಲೋಕಾ ಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌. ಸತ್ಯನಾರಾಯಣ ರಾವ್‌ ತಿಳಿಸಿದ್ದಾರೆ.

ನಾರಾಯಣ ಗೌಡ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.