ADVERTISEMENT

ಆರೋಪಿಗಳಿಗೆ ಕಷ್ಟ, ವಕೀಲರಿಗೂ ನಷ್ಟ!

ಸುಚೇತನಾ ನಾಯ್ಕ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ಬೆಂಗಳೂರು: ಎರಡು ವಾರಗಳಿಂದ ಇಲ್ಲಿ ಕೆಲವು `ಆರೋಪಿ~ಗಳೇ ವಕೀಲರು. ವೃತ್ತಿನಿರತ ಹಲವು ವಕೀಲರು ಸದ್ಯ `ನಿರುದ್ಯೋಗಿ~ಗಳು!  -ಇದೇ 2ರಂದು ನಗರದ ಸಿವಿಲ್ ಕೊರ್ಟ್ ಆವರಣದಲ್ಲಿ ವಕೀಲರು, ಪೊಲೀಸರು ಹಾಗೂ ಮಾಧ್ಯಮದವರ ನಡುವೆ ನಡೆದ ಜಟಾಪಟಿಯ ಪರಿಣಾಮ ಇದು.

ತಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದಾಗಿ ಆರೋಪಿಸಿರುವ ವಕೀಲರು, ಕೆಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನ್ಯಾಯಾಂಗ ಕಲಾಪಕ್ಕೆ ಹಾಜರು ಆಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಹೈಕೋರ್ಟ್ ಹೊರತುಪಡಿಸಿ ಬೇರೆ ಯಾವುದೇ ನ್ಯಾಯಾಲಯಗಳು 15 ದಿನಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ.

ವಕೀಲರ ಈ ಮುಷ್ಕರದ `ಬಿಸಿ~ ಕಕ್ಷಿದಾರರಿಗೆ ತಟ್ಟಿದೆ. ಅದರಲ್ಲೂ ಮುಖ್ಯವಾಗಿ, ಅಪರಾಧ ಪ್ರಕರಣಗಳಲ್ಲಿ ಸಿಲುಕಿರುವವರು ವಕೀಲರು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೆಲವು ಆರೋಪಿಗಳು ಖುದ್ದು ವಾದ ಮಂಡಿಸುವ ಮೂಲಕ ಜಾಮೀನು ಪಡೆದುಕೊಳ್ಳುತ್ತಿದ್ದಾರೆ.

ವಕೀಲರು ಮುಷ್ಕರ ನಿರತರಾದ ಕಾರಣ ನ್ಯಾಯಾಧೀಶರೂ ಆರೋಪಿಗಳ ಅಹವಾಲು ಆಲಿಸಿ ಜಾಮೀನು ಮಂಜೂರು ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ರಿಮಿನಲ್ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅಡಿ ಆರೋಪಿಗಳು ತಾವೇ ವಾದ ಮಂಡಿಸಲು ಅವಕಾಶ ಇದೆ. ಆದರೆ  ಸಾಮಾನ್ಯವಾಗಿ ಆರೋಪಿಗಳು ತಾವೇ ವಾದ ಮಂಡಿಸುವ `ಸಾಹಸ~ಕ್ಕೆ ಕೈ ಹಾಕುವುದಿಲ್ಲ.
ಕೆಲವು ಹಿರಿಯ ವಕೀಲರು ನ್ಯಾಯಾಂಗ ಕಲಾಪಕ್ಕೆ ಹಾಜರು ಆಗುತ್ತಿದ್ದರೂ, ಅವರನ್ನು ನೇಮಿಸಿಕೊಳ್ಳುವ `ಶಕ್ತಿ~ ಈ ಆರೋಪಿಗಳಿಗೆ ಈಗ ಇಲ್ಲ.
 
ಆದುದರಿಂದ ಸ್ವಯಂ ವಾದ ಮಂಡನೆಗೆ ಮುಂದಾಗಿದ್ದಾರೆ. ಚಿಕ್ಕಪುಟ್ಟ ಅಪರಾಧಗಳಲ್ಲಿ ಸಿಲುಕಿರುವ ಆರೋಪ ಹೊತ್ತವರ ವಾದವನ್ನು ನ್ಯಾಯಾಧೀಶರು ಪುರಸ್ಕರಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡುತ್ತಿದ್ದಾರೆ. ಇದರಿಂದ ವಕೀಲರು ನಷ್ಟ ಅನುಭವಿಸುವಂತಾಗಿದೆ.

`ಜಾಮೀನು ನೀಡುವಾಗ ವಕೀಲರು ಭದ್ರತೆ ನೀಡಬೇಕಾಗುತ್ತದೆ. ಆದರೆ ವಕೀಲರು ಮುಷ್ಕರ ನಿರತರಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ನೀಡುತ್ತಿದ್ದಾರೆ. ಇದರಿಂದ ವಕೀಲರಿಗೆ ನಷ್ಟ ಆಗುತ್ತಿರುವುದು ನಿಜ. ಆದರೆ ಈ ಗಲಾಟೆಗೆ ಮೂಲ ಕಾರಣರು ಯಾರು ಎಂಬ ನಿಜಾಂಶ ಹೊರಬರಬೇಕಿದೆ~ ಎಂದು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ `ಪ್ರಜಾವಾಣಿ~ಗೆ ತಿಳಿಸಿದರು.

`ಈ ಮುಷ್ಕರಿಂದ ಯುವ ವಕೀಲರಿಗೆ ಹೆಚ್ಚು ನಷ್ಟ ಆಗುತ್ತಿದೆ. ಆದರೆ ವಕೀಲರ ಸ್ವಾಭಿಮಾನಕ್ಕೆ ಉಂಟಾಗಿರುವ ಧಕ್ಕೆಯ ಮುಂದೆ ಇದು ದೊಡ್ಡ ವಿಷಯವಲ್ಲ~ ಎಂದು ವಕೀಲ ಶಂಕರಪ್ಪ ಅಭಿಪ್ರಾಯ ಪಡುತ್ತಾರೆ.

ಜೈಲು ಭರ್ತಿ: ಇನ್ನೊಂದೆಡೆ, ವಕೀಲರು ಸಿಗದ ಕಾರಣ ಜಾಮೀನು ರಹಿತ ಅಪರಾಧಗಳಲ್ಲಿ ಸಿಲುಕಿರುವ ಆರೋಪಿಗಳೆಲ್ಲ ಜಾಮೀನು ಸಿಗದೆ ಜೈಲು ಪಾಲಾಗುತ್ತಿದ್ದಾರೆ. ಇದರಿಂದ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ತುಂಬಿ ಹೋಗಿದ್ದು, ಪೊಲೀಸರಿಗೆ ಫಜೀತಿಯಾಗಿದೆ.

`ಬೆಂಗಳೂರು ಒಂದರಲ್ಲಿಯೇ ಕ್ರಿಮಿನಲ್ ಪ್ರಕರಣಗಳನ್ನು ನಡೆಸುವ ಸುಮಾರು 50 ಕೋರ್ಟ್‌ಗಳಿವೆ. ಒಂದೊಂದು ಕೋರ್ಟ್‌ನಲ್ಲಿಯೂ ದಿನಂ ಪ್ರತಿ ಕನಿಷ್ಠ 30 ಜಾಮೀನು ಪ್ರಕರಣಗಳು ದಾಖಲಾಗುತ್ತವೆ. ಇದನ್ನು ಗಣನೆಗೆ ತೆಗೆದುಕೊಂಡರೆ ಜೈಲು ಭರ್ತಿಯಾಗುವುದು ಸಹಜ~ ಎನ್ನುತ್ತಾರೆ ಹಿರಿಯ ವಕೀಲ ರವಿ ಬಿ. ನಾಯಕ್.

ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಪ್ರತಿವರ್ಷ ಅಂದಾಜು 350ರಷ್ಟು ಹೆಚ್ಚುತ್ತದೆ. ಈ 15 ದಿನಗಳಲ್ಲಿಯೇ ಸಂಖ್ಯೆ 250ರಷ್ಟು ಹೆಚ್ಚಿದೆ. ಈ ಕಾರಾಗೃಹದಲ್ಲಿ ಸುಮಾರು 2,200 ಕೈದಿಗಳಿಗೆ ಅವಕಾಶ ಇದೆ. ಆದರೆ, ಸದ್ಯ 4,220 ಕೈದಿಗಳಿದ್ದಾರೆ. ಪ್ರಯಾಸದಿಂದ ಸುಮಾರು 5,000 ಕೈದಿಗಳಿಗೆ ಅವಕಾಶ ಕಲ್ಪಿಸಬಹುದು. ಕೈದಿಗಳ ಸಂಖ್ಯೆ ಹೆಚ್ಚಿದರೆ ಅವರನ್ನು ಇರಿಸಲು ಕಾರಾಗೃಹದ ಗೋದಾಮು ಅಥವಾ ಉಗ್ರಾಣಗಳ ಬಳಕೆ ಮಾಡುವ ಚಿಂತನೆಯಲ್ಲಿ ಅಧಿಕಾರಿಗಳು ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.