ADVERTISEMENT

ಆರೋಪಿಗೆ ಮತ್ತಷ್ಟು ಪ್ರಬಲ ಹುದ್ದೆ!

​ಪ್ರಜಾವಾಣಿ ವಾರ್ತೆ
Published 19 ಮೇ 2012, 19:30 IST
Last Updated 19 ಮೇ 2012, 19:30 IST

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಟಿ.ಬಿಸ್ಸೇಗೌಡ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಲೋಕಾಯುಕ್ತ ಪೊಲೀಸರು ಒಂದೂವರೆ ವರ್ಷದಿಂದ ಸಲ್ಲಿಸುತ್ತಿರುವ ಮನವಿಗಳತ್ತ ಕಣ್ಣೆತ್ತಿ ನೋಡದ ಸರ್ಕಾರ, ಈಗ `ಕಳಂಕಿತ~ ಅಧಿಕಾರಿಗೆ `ಅರ್ಧ ರಾಜ್ಯ~ದ ಉಸ್ತುವಾರಿ ನೀಡಿದೆ!

2010ರ ಅಕ್ಟೋಬರ್‌ನಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಒಂದಾದ ಮೇಲೊಂದರಂತೆ ಪತ್ರ ಬರೆಯುತ್ತಿರುವ ಲೋಕಾಯುಕ್ತ ಪೊಲೀಸರು, ಬಿಸ್ಸೇಗೌಡ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ಕೋರುತ್ತಲೇ ಇದ್ದಾರೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪನ್ನೂ ಉಲ್ಲೇಖಿಸಿ ಬರೆದ ಪತ್ರವನ್ನೂ ಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅದಾದ ಬಳಿಕ ಆರೋಪಿಗೆ ಮತ್ತಷ್ಟು ಪ್ರಬಲ ಹುದ್ದೆ ನೀಡಲಾಗಿದೆ.

ಬಿಸ್ಸೇಗೌಡ 2007ರಲ್ಲಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವೃತ್ತದಲ್ಲಿ ಮುಖ್ಯ ಎಂಜಿನಿಯರ್ ಹುದ್ದೆಯಲ್ಲಿದ್ದರು. ಆಗ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಸುಳಿವಿನ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಅಧಿಕಾರಿ ರೂ 1.74 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಇವರ ಒಟ್ಟು ಅಧಿಕೃತ ಆದಾಯ ರೂ 1.02 ಕೋಟಿ.

ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿ 2009ರಲ್ಲಿ `ಬಿ~ ವರದಿ ಸಲ್ಲಿಸಿದ್ದರು. ಆದರೆ, `ಬಿ~ ವರದಿ ಸ್ವೀಕೃತವಾಗುವ ಮುನ್ನವೇ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಮರುತನಿಖೆಗೆ ಅನುಮತಿ ಪಡೆದ ಲೋಕಾಯುಕ್ತ ಪೊಲೀಸರು ಹೊಸದಾಗಿ ತನಿಖೆ ಆರಂಭಿಸಿದ್ದರು. ಬಳಿಕ ಲೋಕಾಯುಕ್ತ ನ್ಯಾಯಾಲಯ 2009ರ `ಬಿ~ ವರದಿಯನ್ನು ತಿರಸ್ಕರಿಸಿತ್ತು.
 
ಬಿಸ್ಸೇಗೌಡ ಶೇ 70.50ರಷ್ಟು ಅಕ್ರಮ ಆಸ್ತಿ ಹೊಂದಿರುವುದು ಮರು ತನಿಖೆಯಲ್ಲಿ ದೃಢಪಟ್ಟಿತ್ತು. ದಾಳಿ ನಡೆದ ಬಳಿಕ ಕೆಲ ದಿನಗಳ ಕಾಲ ಬಿಸ್ಸೇಗೌಡ ಅವರನ್ನು ಅಮಾನತು ಮಾಡಿದ್ದ ಸರ್ಕಾರ, ನಂತರ ಅಮಾನತು ಹಿಂದಕ್ಕೆ ಪಡೆದು ಕರ್ನಾಟಕ ಗೃಹ ಮಂಡಳಿಯ ಮುಖ್ಯ ಎಂಜಿನಿಯರ್ ಹುದ್ದೆಗೆ ನೇಮಕ ಮಾಡಿತ್ತು. ಬುಧವಾರದವರೆಗೂ ಅವರು ಇದೇ ಹುದ್ದೆಯಲ್ಲಿದ್ದರು.

ಐದು ಪತ್ರಕ್ಕೂ ಪ್ರತಿಕ್ರಿಯೆಯಿಲ್ಲ: ಪ್ರಕರಣದ ತನಿಖೆ ಪೂರ್ಣಗೊಳಿಸಿದ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, 2010ರ ಅಕ್ಟೋಬರ್‌ನಲ್ಲಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ (ಎಡಿಜಿಪಿ) ಅಂತಿಮ ವರದಿ ಸಲ್ಲಿಸಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಎಡಿಜಿಪಿ 2010ರ ಅಕ್ಟೋಬರ್ 6ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು.

ಬಿಸ್ಸೇಗೌಡ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ಬಾರದ ಹಿನ್ನೆಲೆಯಲ್ಲಿ ನೆನಪೋಲೆ ಬರೆದ ಎಡಿಜಿಪಿ, `ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕುವ ಸಾರ್ವಜನಿಕ ನೌಕರರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಮೂರು ತಿಂಗಳೊಳಗೆ ಅನುಮತಿ ನೀಡಬೇಕು~ ಎಂದು ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1996ರಲ್ಲಿ ನೀಡಿದ್ದ ತೀರ್ಪನ್ನೂ ನೆನಪಿಸಿದ್ದರು. 2011ರ ಏಪ್ರಿಲ್ 29, ಸೆಪ್ಟೆಂಬರ್ 23, ಡಿಸೆಂಬರ್ 7ರಂದು ಬರೆದ ನೆನಪೋಲೆಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಉತ್ತರವನ್ನೇ ನೀಡಿರಲಿಲ್ಲ.

2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಕೇಂದ್ರ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ವಿರುದ್ಧ ದೂರು ದಾಖಲಿಸಲು ಅನುಮತಿ ಕೋರಿ ಜನತಾ ಪಕ್ಷದ ಅಧ್ಯಕ್ಷ ಡಾ. ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ 2012ರಂದು ತೀರ್ಪು ನೀಡಿದ ಸುಪ್ರೀಂಕೋರ್ಟ್, ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಗೆ ಮೂರು ತಿಂಗಳೊಳಗೆ ಅನುಮತಿ ನೀಡಲೇಬೇಕು ಎಂದು ಮತ್ತೊಮ್ಮೆ ಹೇಳಿತ್ತು. ಅನುಮತಿ ನೀಡಲು ವಿಳಂಬ ಧೋರಣೆ ಅನುಸರಿಸುವ ಸರ್ಕಾರದ ನಿಲುವಿನ ಬಗ್ಗೆ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿತ್ತು.

ಈ ಎಲ್ಲ ಅಂಶಗಳನ್ನೂ ಉಲ್ಲೇಖಿಸಿ 2012ರ ಫೆಬ್ರುವರಿ 12ರಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಲೋಕಾಯುಕ್ತ ಎಡಿಜಿಪಿ, ಬಿಸ್ಸೇಗೌಡ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ತಕ್ಷಣ ಅನುಮತಿ ನೀಡುವಂತೆ ಕೋರಿದ್ದರು. ಆದರೆ, ಸರ್ಕಾರ ತನಿಖಾ ಸಂಸ್ಥೆಗೆ ಅನುಮತಿ ನೀಡುವ ಬದಲಿಗೆ ಆರೋಪಿಗೆ ಅತ್ಯುನ್ನತ ಹುದ್ದೆ ದಯಪಾಲಿಸಿದೆ. ವಾರ್ಷಿಕ 1,500 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಕಾಮಗಾರಿಗಳ ಮೇಲುಸ್ತುವಾರಿಗೆ ಬಿಸ್ಸೇಗೌಡ ಅವರನ್ನು ನೇಮಕ ಮಾಡಲಾಗಿದೆ.

ಮತ್ತೆ ಪತ್ರ: ಈ ಬೆಳವಣಿಗೆ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್, `ಬಿಸ್ಸೇಗೌಡ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ನೀಡುವಂತೆ ಒಂದೂವರೆ ವರ್ಷದಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ಸರ್ಕಾರದ ಕಡೆಯಿಂದ ಸರಿಯಾದ ಸ್ಪಂದನೆ ದೊರೆತಿಲ್ಲ. ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕವೂ ಈ ಬಗ್ಗೆ ಗಮನ ಹರಿಸಿಲ್ಲ. ಈಗ ಆರೋಪಿಗೆ ಮತ್ತಷ್ಟು ಉನ್ನತ ಹುದ್ದೆ ನೀಡಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಒಂದೆರಡು ದಿನಗಳಲ್ಲಿ ಮತ್ತೆ ಪತ್ರ ಬರೆಯಲಾಗುವುದು~ ಎಂದರು.

ತಕ್ಷಣವೇ ಪರಿಶೀಲನೆ: ಪ್ರಕರಣ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರನ್ನು ಸಂಪರ್ಕಿಸಿದಾಗ, `ಬಿಸ್ಸೇಗೌಡ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ಕೋರಿರುವ ಪ್ರಸ್ತಾವ ಒಂದೂವರೆ ವರ್ಷದಿಂದ ಬಾಕಿ ಇರುವ ವಿಷಯ ನನಗೆ ತಿಳಿದಿಲ್ಲ. ಅನುಮತಿ ಕೋರಿ ಪತ್ರ ಬರೆದ ನಂತರ ಉನ್ನತ ಹುದ್ದೆ ನೀಡಿರುವುದೂ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತಕ್ಷಣವೇ ಪರಿಶೀಲನೆ ನಡೆಸಲಾಗುವುದು~ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.