ಗೋಣಿಕೊಪ್ಪಲು: ಮತ್ತಿಗೋಡು ವಲಯದ ನಾಗರಹೊಳೆ ವನ್ಯಜೀವಿ ವಿಭಾಗಕ್ಕೆ ಕಳೆದ ವಾರ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾವಾಡಿಯೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆದರೆ, ಈ ಬಂಧನ ಖಂಡಿಸಿ ಶಿಬಿರದಲ್ಲಿ ಮಾವುತರು ಹಾಗೂ ಕಾವಾಡಿಗಳು ದಿನವಿಡೀ ಪ್ರತಿಭಟನೆ ನಡೆಸಿದರು.
ಮತ್ತಿಗೋಡು ಸಾಕಾನೆ ಶಿಬರದ ಕಾವಾಡಿ ವಿನು ಎಂಬಾತನೆ ಬಂಧಿತ ಆರೋಪಿ. ಅರಣ್ಯಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪಲು ಸಿಪಿಐ ಪಿ.ಕೆ. ರಾಜು ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದರು.
21ವರ್ಷದ ವಿನು ಎರಡು ವರ್ಷಗಳಿಂದ ‘ಮಾಸ್ತಿ’ ಎಂಬ ಆನೆಯ ಕಾವಾಡಿಯಾಗಿದ್ದ. ಈತ ತನ್ನ ಕುಟುಂಬ ಸಮೇತ ಮತ್ತಿಗೋಡು ಶಿಬಿರದಲ್ಲಿ ವಾಸವಿದ್ದ. ಸಕಲೇಶಪುರದಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಈತ ಇಲಾಖೆಯ ಮೇಲಧಿಕಾರಿಕಾರಿಗಳ ಮಾತನ್ನು ಧಿಕ್ಕರಿಸಿದ್ದ ಎನ್ನಲಾಗಿದೆ. ಇದರಿಂದ ಅಸಮಾಧಾಗೊಂಡ ಗಾರ್ಡ್ ಫೆಲೆಕ್ಷ್ ಅವರು ಈತನ ಮೇಲೆ ದೂರು ನೀಡಿದ್ದರು. ಫೆಬ್ರುವರಿ 8ರಂದು ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆ ಸಂದರ್ಭದಲ್ಲಿ ಈತ ತನ್ನ ಕುಟುಂಬ ಸಮೇತ ಶಿಬಿರ ತೊರೆದು ಪಂಚವಳ್ಳಿ ಸಮೀಪದ ಶೆಟ್ಟಿಹಳ್ಳಿಯಲ್ಲಿ ವಾಸವಿದ್ದ.
ಅರಣ್ಯಾಧಿಕಾರಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ ವಿನು ಮಾರ್ಚ್ 12ರಂದು ಮತ್ತೆ ಮತ್ತಿಗೋಡಿಗೆ ಬಂದಿದ್ದ. ಅಂದು ಅರಣ್ಯಾಧಿಕಾರಿಗಳು ಇಲ್ಲದ ಸಂದರ್ಭವನ್ನು ನೋಡಿ ವಿನು ಸಾಕಾನೆ ಶಿಬಿರದಿಂದ ಕೇವಲ 300 ಮೀಟರ್ ದೂರ ಕಾಡಿನೊಳಗೆ ತೆರಳಿ ಬಿದಿರಿನ ಹಿಂಡಿಲಿಗೆ ಒಣಗಿದ ಆನೆ ಲದ್ದಿ ಬಳಸಿ ಬೆಂಕಿ ಕೊಟ್ಟಿದ್ದಾನೆ ಎಂಬುದು ಪೊಲೀಸರ ವಿವರ. ಇದೀಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆನೆ ಚಾಕರಿಗೆ ಯಾರೂ ಇಲ್ಲ!
ಕಾವಾಡಿ ವಿನು ಬಂಧನವನ್ನು ವಿರೋಧಿಸಿ ಸಾಕಾನೆ ಶಿಬಿರದ ಮಾವುತರು ಮತ್ತು ಕಾವಾಡಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಶಿಬಿರದಲ್ಲಿ ಆನೆಗಳನ್ನು ನೋಡಿಕೊಳ್ಳುವವರೇ ಇಲ್ಲವಾಗಿದೆ.
ಶಿಬಿರದ 45 ಮಾವುತರು ಹಾಗೂ ಕಾವಾಡಿಗಳು ತಮ್ಮ ಕುಟುಂಬ ಸಮೇತ ಶಿಬಿರವನ್ನು ಬಿಟ್ಟು ಪಂಚವಳ್ಳಿ ಬಳಿಯ ಶೆಟ್ಟಿಹಳ್ಳಿಗೆ ಶುಕ್ರವಾರ ಲಾರಿ ಹತ್ತಿ ಪ್ರಯಾಣ ಬೆಳೆಸಿದರು.
ಇದರಿಂದಾಗಿ ಶಿಬಿರದ ವಲಯ ಅರಣ್ಯಾಧಿಕಾರಿ ದೇವರಾಜು ಹಾಗೂ ಸಿಬ್ಬಂದಿ ಸೇರಿ ಶಿಬಿರದಲ್ಲಿರುವ 34 ಆನೆಗಳ ಪೈಕಿ 19 ಆನೆಗಳನ್ನು ಕಾಡಿಗೆ ಬಿಟ್ಟಿದ್ದಾರೆ. ಮಾವುತ ವಸಂತನನ್ನು ಬಿಟ್ಟು ಬೇರೆಯವರನ್ನು ಹತ್ತಿರ ಬಿಟ್ಟುಕೊಳ್ಳದ ‘ಅಭಿಮನ್ಯು’ ಹಾಗೂ ಕೆಲವು ಮರಿ ಆನೆಗಳು ಮಾತ್ರ ಶಿಬಿರದಲ್ಲಿಯೇ ಇವೆ. ಅಭಿಮನ್ಯುವಿಗೆ ದೂರದಿಂದಲೇ ಆಹಾರ, ನೀರು ಕೊಡಲಾಗುತ್ತಿದೆ. ಸಕಲೇಶಪುರ ಅರಣ್ಯದಲ್ಲಿ ಸೆರೆ ಹಿಡಿದ ನಾಲ್ಕು ಆನೆಗಳು ಕೂಡ ಮರದ ದೊಡ್ಡಿಯಲ್ಲಿ ನಿಂತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.