ADVERTISEMENT

ಆರ್‌ಟಿಇ: ಇಂದಿನಿಂದ ದಾಖಲಾತಿ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 19:30 IST
Last Updated 6 ಜನವರಿ 2014, 19:30 IST

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2014–15ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಮಂಗಳವಾರದಿಂದ ಆರಂಭವಾಗಲಿದೆ.

ರಾಜ್ಯದಲ್ಲಿ ಕಾಯ್ದೆ ಜಾರಿಗೆ ಬಂದ ಬಳಿಕ ಮೊದಲ ಎರಡು ವರ್ಷಗಳಲ್ಲಿ ದಾಖಲಾತಿ ಪ್ರಕ್ರಿಯೆ ಸಾಕಷ್ಟು ಗೊಂದಲಗಳಿಂದ ಕೂಡಿತ್ತು. ಖಾಸಗಿ ಶಾಲೆಗಳ ಅಸಹಕಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಕೊರತೆ ಹಾಗೂ ಪೋಷಕರಿಗೆ ಅರಿವಿನ ಕೊರತೆಯಿಂದ ಕಾಯ್ದೆ ಸಮರ್ಪಕವಾಗಿ ಜಾರಿಗೆ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಶಿಕ್ಷಣ ಇಲಾಖೆ ಈ ಸಲ ಆಯ್ಕೆ ಮಾನದಂಡದಲ್ಲಿ ಕೆಲವು ಬದಲಾವಣೆ­ಗಳನ್ನು ಮಾಡಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹೊರತುಪಡಿಸಿ ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಶೇ 25 ಮೀಸಲಾತಿ ನೀಡಬೇಕಿದೆ. ಪ್ರವೇಶ ಪ್ರಕ್ರಿಯೆ ವೇಳೆಗೆ ಅನಾಥ ಮಗು, ವಲಸೆ ಮಗು, ಅಂಗವಿಕಲ ಮಗು ಹಾಗೂ ಎಚ್‌ಐವಿ ಪೀಡಿತ ಮಗುವಿಗೆ ಮೊದಲ ಆದ್ಯತೆ ನೀಡಲು ಸೂಚಿಸಲಾಗಿದೆ.

ಈ ಸಲ ಪೋಷಕರ ಆದಾಯ ಮಿತಿಯನ್ನು ಪರಿಷ್ಕರಣೆ ಮಾಡಲಾಗಿದೆ.  ವಾರ್ಷಿಕ ₨3.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು. ಆಯ್ಕೆ ಪ್ರಕ್ರಿಯೆ ನಡೆಸುವಾಗ ವಾರ್ಷಿಕ ₨1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರನ್ನು ಮೊದಲು ಪರಿಗಣಿಸಲಾಗುವುದು. ಅಂತಹ ಮಕ್ಕಳ ಸಂಖ್ಯೆ ಮೀಸಲಾತಿ ಇಡಲಾದ ಸೀಟುಗಳಿಗಿಂತ ಜಾಸ್ತಿ ಇದ್ದಲ್ಲಿ ಲಾಟರಿ ಮೂಲಕ ವಿದ್ಯಾರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಇನ್ನೂ ಸೀಟುಗಳು ಉಳಿಕೆ ಇದ್ದಲ್ಲಿ ₨1ರಿಂದ ₨3.5 ಲಕ್ಷದ ವರೆಗೆ ಆದಾಯ ಇರುವವರನ್ನು ಪರಿಗಣಿಸಲಾಗುವುದು. ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅರ್ಜಿಗಳು ಬಂದರೆ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಶಾಲೆಗಳಲ್ಲೇ ಸಹಾಯವಾಣಿ ಬೇಕಿದೆ: ‘ಕಳೆದ ಎರಡು ವರ್ಷಗಳಲ್ಲಿ ಪೋಷಕರು ಅರ್ಜಿ ಸಲ್ಲಿಸಲು ಬೇಕಾದ ಮುಕ್ತ ವಾತಾವರಣವನ್ನು ಖಾಸಗಿ ಶಾಲೆಗಳು ನಿರ್ಮಿಸಿಲ್ಲ. ಆರ್‌ಟಿಇ ಅನುಷ್ಠಾನಕ್ಕೆ ಏಳು ಅಂಶಗಳನ್ನು ಶಾಲೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿತ್ತು. ಶಾಲೆಗಳಲ್ಲಿ ಲಭ್ಯ ಇರುವ ಸೀಟುಗಳ ಬಗ್ಗೆ ಮಾಹಿತಿಯನ್ನು ಶಾಲಾ ಮಾಹಿತಿ ಫಲಕದಲ್ಲಿ ಹಾಕಬೇಕಿತ್ತು ಎಂದು ಸೂಚಿಸಲಾಗಿತ್ತು. ಯಾವ ಶಾಲೆಯಲ್ಲೂ ಇಂತಹ ಫಲಕ ಹಾಕಿಲ್ಲ. ಈ ಸಲ ಗೊಂದಲ ನಿವಾರಣೆಗೆ ಎಲ್ಲ ಶಾಲೆಗಳಲ್ಲಿ ಆರ್‌ಟಿಇ ಸಹಾಯವಾಣಿ ಆರಂಭಿಸಬೇಕು’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಮಗು ಹಾಗೂ ಕಾನೂನು ಕೇಂದ್ರದ ಡಾ.ವಿ.ಪಿ. ನಿರಂಜನಾರಾಧ್ಯ ಆಗ್ರಹಿಸಿದರು.

‘ಕ್ಷೇತ್ರ ಶಿಕ್ಷಣಾಧಿಕಾರಿ ಅಧೀನದಲ್ಲಿ ಶಿಕ್ಷಣ ಸಂಯೋಜಕರು, ಬಿಆರ್‌ಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರು  ಮಂಗಳವಾರ ದಿಂದಲೇ ಪ್ರತಿ ಶಾಲೆಗಳಿಗೆ ಭೇಟಿ ನೀಡಿ ದಾಖಲಾತಿ ಪ್ರಕ್ರಿಯೆಯನ್ನು ಪರಿಶೀಲಿಸಬೇಕು. 4–5 ದಿನಗಳ ಕಾಲ ನಿರಂತರ ಭೇಟಿ ನೀಡಬೇಕು. ಆಗ ಖಾಸಗಿ ಶಾಲೆಗಳ ಧೋರಣೆಯೂ ಬದಲಾಗುತ್ತದೆ. ನೈಜ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಬಗೆಹರಿಸಲು ಸಾಧ್ಯವಾಗುತ್ತದೆ’ ಎಂದು ಅವರು ಕಿವಿಮಾತು ಹೇಳಿದರು. 

‘ಈವರೆಗೆ ದಾಖಲಾತಿ ಪ್ರಕ್ರಿಯೆ ಗೌಪ್ಯವಾಗಿ ನಡೆದಿತ್ತು. ಆರ್‌ಟಿಇ ಅಡಿ ದಾಖಲಾದ ವಿದ್ಯಾರ್ಥಿಗಳೂ ಶುಲ್ಕ ಪಾವತಿಸುವಂತೆ ಖಾಸಗಿ ಶಾಲೆಗಳು ಬೆದರಿಕೆ ಒಡ್ಡಿದ್ದವು. ಈ ಸಂಬಂಧ ಇಲಾಖೆಗೆ ದಾಖಲಾದ ದೂರುಗಳಿಗೂ ಕಠಿಣ ಕ್ರಮ ಕೈಗೊಂಡಿಲ್ಲ. ಪೋಷಕರು ಭಯಭೀತಿ ಇಲ್ಲದೆ ಮುಕ್ತವಾಗಿ ಅರ್ಜಿ ಸಲ್ಲಿಸುವ ಸನ್ನಿವೇಶವನ್ನು ಇಲಾಖೆ ಸೃಷ್ಟಿಸಬೇಕು’ ಎಂದು ಆರ್‌ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹ ಜಿ.ರಾವ್‌ ಒತ್ತಾಯಿಸಿದರು.

‘ಬಹುತೇಕ ಪೋಷಕರಿಗೆ ಅರ್ಜಿ ನಮೂನೆಗಳೇ ದೊರಕುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಪ್ರಶ್ನಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಕಡೆ ಪೋಷಕರನ್ನು ಸಾಗ ಹಾಕುತ್ತಾರೆ. ಹೆಚ್ಚಿನ ಪೋಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳು ಎಲ್ಲಿವೆ ಎಂಬುದು ಗೊತ್ತಿರುವುದಿಲ್ಲ. ಇದನ್ನು ತಪ್ಪಿಸಲು ಶಾಲೆಗಳಲ್ಲೇ ಅರ್ಜಿಗಳು ದೊರಕುವ ವ್ಯವಸ್ಥೆ ಆಗಬೇಕು’ ಎಂದು ಅವರು ಹೇಳಿದರು.

ದಾಖಲಾತಿ ಪ್ರಕ್ರಿಯೆ
ಪ್ರವೇಶ ಕೋರಿ ಶಾಲೆಗಳಿಗೆ ಅರ್ಜಿ ಸಲ್ಲಿಕೆ  ಜ.7ರಿಂದ ಫೆಬ್ರು­ವರಿ 8

ಶಾಲೆ­ಗಳು ಅರ್ಜಿ ಪರಿಶೀಲಿಸಿ ಬಿಇಒ­­ಗಳಿಗೆ ಸಲ್ಲಿಸಬೇಕಾದ ದಿ. ಫೆ.17
ಬಿಇಒಗಳು ದಾಖಲಾತಿ ಅನು­ಮೋದಿಸಿ ಶಾಲೆಗಳಿಗೆ ಕಳುಹಿಸ­ಬೇಕಾದ­ ದಿ. ಫೆ.28
ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭ ಮಾರ್ಚ್ 3ರಿಂದ

*www.schoolecucation.kar.nic.inನಲ್ಲಿ ಅರ್ಜಿ ಲಭ್ಯ.
*ಶಿಕ್ಷಣ ಇಲಾಖೆಯ ಸಹಾಯ­ವಾಣಿ: 1800 4253 4567.
*ಕಾಯ್ದೆಯಲ್ಲಿನ ಯಾವುದೇ ವಿಚಾರ ಉಲ್ಲಂಘನೆಯಾಗುತ್ತಿದೆ ಎಂದು ಕಂಡು ಬಂದಲ್ಲಿ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ದೂರು ಸಲ್ಲಿಸಬೇಕು. ಅವರಿಂದ ಸೂಕ್ತ ಪ್ರತಿಕ್ರಿಯೆ ಬಾರದೆ ಇದ್ದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (080–22115291) ದೂರು ಸಲ್ಲಿಸಬಹುದು.

ಪೋಷಕರೇ ನಿಮಗಿದು ತಿಳಿದಿದೆಯೇ?
*ಅರ್ಜಿ ಸಲ್ಲಿಸಿದ ಬಳಿಕ ಮರೆಯದೆ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು.
*ಪ್ರತಿಯೊಂದು ಅನುದಾನಿತ /ಅನುದಾನರಹಿತ ಶಾಲೆಗಳು ಆರ್‌ಟಿಇ ಅಡಿ ಲಭ್ಯ ಇರುವ ಸೀಟುಗಳ ಸಂಖ್ಯೆಯನ್ನು ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಿರಲೇಬೇಕು.
*ಅರ್ಜಿ ನೀಡಲು ಹಾಗೂ ಪಡೆದುಕೊಳ್ಳಲು ಯಾವುದೇ ಶುಲ್ಕ ಇಲ್ಲ.
*ನೀವು ಆಯ್ಕೆ ಮಾಡಿರುವ ಶಾಲೆಯ ಆರಂಭ ತರಗತಿ ಎಲ್‌ಕೆಜಿ ಅಥವಾ ಒಂದನೇ ತರಗತಿಯೇ ಎಂಬುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
*ಆರ್‌ಟಿಇ ಮೀಸಲಾತಿ ಪಡೆದ ಮಕ್ಕಳು ಸರ್ಕಾರದ ಯಾವುದೇ ಯೋಜನೆಗಳಿಂದ ವಂಚಿತರಾಗುವುದಿಲ್ಲ. ಉದಾಹರಣೆ: ಭಾಗ್ಯಲಕ್ಷ್ಮಿ ಯೋಜನೆ.
*ಶೇ 25 ಮೀಸಲಾತಿಯಡಿ ಶಾಲೆಗೆ ದಾಖಲಾದರೆ ಎಂಟನೇ ತರಗತಿವರೆಗೆ ಶಿಕ್ಷಣ ಉಚಿತ. ಶಾಲೆಗಳ ಆಡಳಿತ ಮಂಡಳಿಗಳು ಹಣ ಪಾವತಿಗೆ ಒತ್ತಡ ಹೇರಿದರೆ ಇಲಾಖೆಗೆ ದೂರು ನೀಡಿ.
*ಒಂದು ವೇಳೆ ಹೆಚ್ಚಿನ ಅರ್ಜಿಗಳು ಬಂದು ಮಕ್ಕಳನ್ನು ಲಾಟರಿ ಮೂಲಕ ಆರಿಸುವ ಸ್ಥಿತಿ ನಿರ್ಮಾಣವಾದರೆ ಲಾಟರಿ ಪ್ರಕ್ರಿಯೆ ನಡೆಸುವ ವೇಳೆ ತಪ್ಪದೆ ಹಾಜರಾಗಿ.
*ಪೋಷಕರಿಗೆ ಹಾಗೂ ಮಕ್ಕಳಿಗೆ ಪ್ರವೇಶ ಪರೀಕ್ಷೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
*ಎಲ್‌ಕೆಜಿಗೆ ದಾಖಲು ಮಾಡಲು ಮಗುವಿಗೆ 3 ವರ್ಷ ಐದು ತಿಂಗಳು ಆಗಿರಬೇಕು. ಒಂದನೇ ತರಗತಿಗೆ ದಾಕಲು ಮಾಡಲು 5 ವರ್ಷ 2 ತಿಂಗಳು ಆಗಿರಬೇಕು.
*ಶೇ 25 ಮೀಸಲಾತಿಯಡಿ ಯಾವುದೇ ಕಾರಣಕ್ಕೂ ವರ್ಗಾವಣೆ ಇರುವುದಿಲ್ಲ.
*ಮನೆಯ ಒಂದು ಕಿ.ಮೀ. ಅಂತರದಲ್ಲಿರುವ ಸರ್ಕಾರೇತರ ಶಾಲೆಗಳ ಪಟ್ಟಿಯನ್ನು ಇಟ್ಟುಕೊಳ್ಳ­ಬೇಕು. 2–3 ಶಾಲೆಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ.
*ಪೋಷಕರು ಮಗುವಿನ ಭಾವಚಿತ್ರ, ಜನ್ಮ ದಾಖಲಾತಿ ಪತ್ರ, ಜಾತಿ ಹಾಗೂ ಆದಾಯ ಪ್ರಮಾಣಪತ್ರ, ವಾಸಸ್ಥಳದ ದಾಖಲೆ ಹೊಂದಿರಬೇಕು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT