ADVERTISEMENT

ಆಸ್ತಿ ವಿವರ ಸಲ್ಲಿಸದ ಅಂಬರೀಷ್, ಎಚ್‌ಡಿಕೆ

32 ಶಾಸಕರ ವಿರುದ್ಧ ರಾಜ್ಯಪಾಲರಿಗೆ ಲೋಕಾಯುಕ್ತರ ವರದಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಬೆಂಗಳೂರು:ವಸತಿ ಸಚಿವ ಅಂಬರೀಷ್, ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿಧಾನಸಭೆಯ 29 ಮತ್ತು ವಿಧಾನ ಪರಿಷತ್‌ನ ಮೂವರು ಸದಸ್ಯರು2012-13ನೇ ಸಾಲಿನ ಆಸ್ತಿ ವಿವರವನ್ನು ಲೋಕಾಯುಕ್ತರಿಗೆ ಸಲ್ಲಿಸಲು ವಿಫಲರಾಗಿದ್ದಾರೆ. ಈಸಂಬಂಧ ಲೋಕಾಯುಕ್ತರು ರಾಜ್ಯಪಾಲರಿಗೆ ಸೋಮವಾರ ವರದಿ ಸಲ್ಲಿಸಿದ್ದಾರೆ.

ಆಸ್ತಿ ವಿವರ ಸಲ್ಲಿಸಲು ನಿಗದಿಯಾಗಿದ್ದ ಮೊದಲ ಗಡುವು ಜುಲೈ 1ಕ್ಕೆ ಅಂತ್ಯಗೊಂಡಿತ್ತು. ಆ ಬಳಿಕ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರು ರಾಜ್ಯಪಾಲರಿಗೆ ಮೊದಲ ವರದಿ ಸಲ್ಲಿಸಿದ್ದರು. ಲೋಕಾಯುಕ್ತ ಕಾಯ್ದೆಯ ಪ್ರಕಾರ, ಮೊದಲ ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸದ ಶಾಸಕರು ನಂತರದ 60 ದಿನಗಳೊಳಗೆ (ಸೆಪ್ಟೆಂಬರ್ 1) ವಿಳಂಬಕ್ಕೆ ಕಾರಣ ಸಹಿತವಾಗಿ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಅಂತಿಮ ಗಡುವು ಭಾನುವಾರಕ್ಕೆ ಕೊನೆಗೊಂಡಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ನ ತಲಾ 12, ಬಿಜೆಪಿ, ಕೆಜೆಪಿ, ಸಮಾಜವಾದಿ ಪಕ್ಷ, ಸರ್ವೋದಯ ಕರ್ನಾಟಕ ಪಕ್ಷ ಮತ್ತು ಕರ್ನಾಟಕ ಮಕ್ಕಳ ಪಕ್ಷದ ತಲಾ ಒಬ್ಬ ಶಾಸಕರು ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸಿಲ್ಲ. ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸದೇ ಇರುವ ವಿಧಾನ ಪರಿಷತ್ ಸದಸ್ಯರಲ್ಲಿ ಇಬ್ಬರು ಬಿಜೆಪಿಯವರು. ಒಬ್ಬ ಸದಸ್ಯ ಜೆಡಿಎಸ್‌ನವರು. ಇವರ ಹೆಸರುಗಳು ಇಲ್ಲಿವೆ.

ಕಾಂಗ್ರೆಸ್: ಅಂಬರೀಷ್ (ಮಂಡ್ಯ), ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ (ಕುಂದಗೋಳ), ಪ್ರಸಾದ್ ಅಬ್ಬಯ್ಯ (ಹುಬ್ಬಳ್ಳಿ-ಧಾರವಾಡ ಪೂರ್ವ), ಮನೋಹರ ಎಚ್.ತಹಸೀಲ್ದಾರ್ (ಹಾನಗಲ್), ಕೆ.ಶಿವಮೂರ್ತಿ (ಮಾಯಕೊಂಡ), ಕೆ.ಷಡಕ್ಷರಿ (ತಿಪಟೂರು), ಮುನಿರತ್ನ (ರಾಜರಾಜೇಶ್ವರಿನಗರ), ಆರ್.ರೋಷನ್‌ಬೇಗ್ (ಶಿವಾಜಿನಗರ), ಬಿ.ಶಿವಣ್ಣ (ಆನೇಕಲ್), ಎ.ಮಂಜು (ಅರಕಲಗೂಡು), ಮೊಹಿದ್ದೀನ್ ಬಾವಾ (ಮಂಗಳೂರು ಉತ್ತರ) ಮತ್ತು ಜಯಣ್ಣ (ಕೊಳ್ಳೇಗಾಲ).

ಜೆಡಿಎಸ್: ಎಚ್.ಡಿ.ಕುಮಾರಸ್ವಾಮಿ (ರಾಮನಗರ), ಮಲ್ಲಿಕಾರ್ಜುನ ಖೂಬಾ (ಬಸವಕಲ್ಯಾಣ), ಡಾ.ಎಸ್.ಶಿವರಾಜ ಪಾಟೀಲ (ರಾಯಚೂರು), ಭೀಮಾನಾಯಕ್ (ಹಗರಿಬೊಮ್ಮನಹಳ್ಳಿ), ಬಿ.ಬಿ.ನಿಂಗಯ್ಯ (ಮೂಡಿಗೆರೆ), ವೈ.ಎಸ್.ವಿ.ದತ್ತ (ಕಡೂರು), ಪಿ.ಆರ್.ಸುಧಾಕರಲಾಲ್ (ಕೊರಟಗೆರೆ), ಎಂ.ರಾಜಣ್ಣ (ಶಿಡ್ಲಘಟ್ಟ), ಜೆ.ಕೆ.ಕೃಷ್ಣಾರೆಡ್ಡಿ (ಚಿಂತಾಮಣಿ), ಡಾ.ಕೆ.ಶ್ರೀನಿವಾಸಮೂರ್ತಿ (ನೆಲಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ) ಮತ್ತು ಸಾ.ರಾ.ಮಹೇಶ್(ಕೆ.ಆರ್.ನಗರ).

ಬಿಜೆಪಿಯ ಎಂ.ಸತೀಶ್ ರೆಡ್ಡಿ (ಬೊಮ್ಮನಹಳ್ಳಿ), ಸಮಾಜವಾದಿ ಪಕ್ಷದ ಸಿ.ಪಿ.ಯೋಗೇಶ್ವರ್ (ಚನ್ನಪಟ್ಟಣ), ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ಪುಟ್ಟಣ್ಣಯ್ಯ (ಮೇಲುಕೋಟೆ), ಕರ್ನಾಟಕ ಜನತಾ ಪಕ್ಷದ ಗುರು ಪಾಟೀಲ್ ಶಿರವಾಳ ಮತ್ತು ಕರ್ನಾಟಕ ಮಕ್ಕಳ ಪಕ್ಷದ ಅಶೋಕ್ ಖೇಣಿ (ಬೀದರ್ ದಕ್ಷಿಣ)

ವಿಧಾನ ಪರಿಷತ್ ಸದಸ್ಯರು:  ರಘುನಾಥರಾವ್ ಮಲ್ಕಾಪುರೆ, ತಾರಾ ಅನೂರಾಧಾ (ಬಿಜೆಪಿ) ಹಾಗೂ ಸೈಯ್ಯದ್ ಮುದೀರ್ ಆಗಾ (ಜೆಡಿಎಸ್).

ಅಂತಿಮ ಗಡುವಿನವರೆಗೂ ಆಸ್ತಿ ವಿವರ ಸಲ್ಲಿಸದ ಕೆಲ ಶಾಸಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 176ರ ಅಡಿಯಲ್ಲಿ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಆ ನಂತರದ ದಿನಗಳಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಈ ಕಲಂನ ಪ್ರಕಾರ, ಯಾವುದೇ ಸಾರ್ವಜನಿಕ ನೌಕರ ಕಡ್ಡಾಯವಾಗಿ ಸಲ್ಲಿಸಲೇಬೇಕಾದ ಮಾಹಿತಿಯನ್ನು ಸಲ್ಲಿಸುವಲ್ಲಿ ಲೋಪ ಎಸಗುವುದು ದಂಡನಾರ್ಹ ಅಪರಾಧ.

ತನಿಖೆಗೆ ಅವಕಾಶ
ಸಚಿವರಾಗಿದ್ದೂ ಆಸ್ತಿ ವಿವರ ಸಲ್ಲಿಸುವಲ್ಲಿ ವಿಫಲವಾಗಿರುವ ಎಂ.ಎಚ್.ಅಂಬರೀಷ್ ವಿರುದ್ಧ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದಲ್ಲಿ ಅವರ ವಿರುದ್ಧ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಸಚಿವರಾಗಿದ್ದ ನಾಗಪ್ಪ ಸಾಲೋಣಿ ಮತ್ತು ಅಶ್ವತ್ಥನಾರಾಯಣ ರೆಡ್ಡಿ ನಿಗದಿತ ಗಡುವಿನೊಳಗೆ ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸಿರಲಿಲ್ಲ. ಆಗ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 13 (1) ಮತ್ತು 22ರ ಅಡಿಯಲ್ಲಿ ವಿಚಾರಣೆ ನಡೆಸಿದ್ದ ಆಗಿನ ಲೋಕಾಯುಕ್ತರು, ಇಬ್ಬರನ್ನೂ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಗೆ ಶಿಫಾರಸು ಮಾಡಿದ್ದರು. ಲೋಕಾಯುಕ್ತರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದ ಸದಸ್ಯರಾಗಿದ್ದ ಆಲ್ಕೋಡ್ ಹನುಮಂತಪ್ಪ ಮತ್ತು ಶರಣಬಸಪ್ಪ ದರ್ಶನಾಪುರ ಅವರು ನಿಗದಿತ ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸಿರಲಿಲ್ಲ. ಈ ಸಂಬಂಧ ವಿಚಾರಣೆ ನಡೆಸಿ, ಇಬ್ಬರನ್ನೂ ಸಂಪುಟದಿಂದ ಕೈಬಿಡಲು ಶಿಫಾರಸು ಮಾಡುವಂತೆ ಮಾಜಿ ಸಚಿವ ಎಸ್.ಕೆ.ಕಾಂತಾ ಅವರು ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರಿಗೆ ದೂರು ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಲೋಕಾಯುಕ್ತರು, ಆಲ್ಕೋಡ್ ಮತ್ತು ದರ್ಶನಾಪುರ ಅವರನ್ನು ಸಂಪುಟದಿಂದ ಕೈಬಿಡುವಂತೆ ಕುಮಾರಸ್ವಾಮಿ ಅವರಿಗೆ ಶಿಫಾರಸು ಮಾಡಿದ್ದರು. ಆದರೆ, ಕೆಲ ದಿನಗಳ ಕಾಲ ವರದಿಯನ್ನು ಹಾಗೆಯೇ ಇರಿಸಿಕೊಂಡಿದ್ದ ಮುಖ್ಯಮಂತ್ರಿ ಅದನ್ನು ತಿರಸ್ಕರಿಸಿದ್ದರು.

ಸಿಎಂ ಅಧಿಕಾರ
ಲೋಕಾಯುಕ್ತರು ಸಲ್ಲಿಸುವ ವರದಿ ಬಗ್ಗೆ ಸಕ್ಷಮ ಪ್ರಾಧಿಕಾರ (ಸಚಿವರ ವಿಷಯದಲ್ಲಿ ಮುಖ್ಯಮಂತ್ರಿ, ಶಾಸಕರ ವಿಷಯದಲ್ಲಿ  ಸ್ಪೀಕರ್ ಅಥವಾ ಸಭಾಪತಿ) ಮೂರು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕಾಗುತ್ತದೆ. ವರದಿಯನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಧಿಕಾರ ಅದಕ್ಕಿದೆ. ಮೂರು ತಿಂಗಳ ಬಳಿಕವೂ ಅದು ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ವರದಿಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ಕಾಯ್ದೆ ಹೇಳುತ್ತದೆ.

ವಿಳಂಬಕ್ಕೆ ಕಾರಣ ಇದೆ
ಬಿಡದಿ ಬಳಿ ಇರುವ ನಮ್ಮ ತೋಟದಲ್ಲಿ ಗ್ಯಾಸ್‌ಪೈಪ್‌ಲೈನ್ ಹಾದು ಹೋಗಿರುವ ಕಾರಣ ಗೇಲ್ ಇಂಡಿಯಾ ಲಿಮಿಟೆಡ್‌ನಿಂದ 20 ಲಕ್ಷ ರೂಪಾಯಿ ಪರಿಹಾರ ದೊರೆತಿದೆ. ಆದರೆ, ಪರಿಹಾರ ನೀಡಿರುವ ಕುರಿತು ಅಧಿಕೃತ ದಾಖಲೆಗಳನ್ನು ಇನ್ನೂ ನೀಡಿಲ್ಲ. ಹೀಗಾಗಿ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವುದು ತಡವಾಗಿದೆ.
- ಎಚ್.ಡಿ.ಕುಮಾರಸ್ವಾಮಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.