ADVERTISEMENT

ಉದ್ಯೋಗ ಖಾತರಿ: 900 ಕೋಟಿ ಕೂಲಿ ಬಾಕಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ತುಮಕೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ ರೂ. 900 ಕೋಟಿ ಕೂಲಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಎಂಎನ್‌ಆರ್‌ಇಜಿ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿ ನಿರ್ದೇಶಕ ಟಿ.ವೆಂಕಟೇಶ್ ಮಂಗಳವಾರ ತಿಳಿಸಿದರು.

ಕುಣಿಗಲ್ ತಾಲ್ಲೂಕು ರಂಗಸ್ವಾಮಿಗುಡ್ಡ, ಎಡೆಯೂರು, ಬಿಳಿದೇವಾಲಯ ಗ್ರಾಮ ಪಂಚಾಯಿತಿ, ಸಿದ್ದಾಪುರ, ತುವ್ವೇಕೆರೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಡೆದಿರವ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೂಲಿ ನೀಡಲು ಹಣದ ಕೊರತೆ ಇಲ್ಲ, ಆದರೆ 2009-10ನೇ ಸಾಲಿನಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಸಾಕಷ್ಟು ಕಾಮಗಾರಿಗಳ ವಿವರ ಎಂಐಎಸ್‌ಗೆ ದಾಖಲಾಗಿರಲಿಲ್ಲ. ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಂಐಎಸ್ ~ಲಾಕ್~ ಮಾಡಿತ್ತು. ಹೀಗಾಗಿ ಈ ಕಾಮಗಾರಿಗಳ ಕೂಲಿ ಇದೂವರೆಗೂ ಪಾವತಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಾಕಿ ಕೂಲಿ ನೀಡುವ ಸಂಬಂಧ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಗಿದ್ದು, ಫೆಬ್ರುವರಿಯಲ್ಲಿ ಎಂಐಎಸ್ ದಾಖಲಿಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಆಗ ಕೂಲಿ ಬಾಕಿ ಇರುವ ಎಲ್ಲ ಕಾಮಗಾರಿಗಳ ವಿವರ ಎಂಐಎಸ್‌ಗೆ ತುಂಬಿ ಬಾಕಿ ಕೂಲಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕುಗಳ ನಡುವೆ ಆಂತರಿಕ ಹಣ ವರ್ಗಾವಣೆಗೆ ಈ ಹಿಂದೆ ಅವಕಾಶ ಇರಲಿಲ್ಲ. ಆದರೆ ಈಗ ಕೊರತೆ ಇರುವ ತಾಲ್ಲೂಕುಗಳಿಗೆ ಹಣ ಇರುವ ತಾಲ್ಲೂಕುಗಳಿಂದ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಯೋಜನೆಗೆ ಹಣದ ಸಮಸ್ಯೆ ಕಂಡುಬಂದ್ದರೆ ಮತ್ತೊಂದು ತಾಲ್ಲೂಕಿನಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳಬಹುದಾಗಿದೆ ಎಂದರು.

ಬಹಳಷ್ಟು ಕಡೆಗಳಲ್ಲಿ ಯೋಜನೆ ವಿಫಲಗೊಳ್ಳಲು ಕೂಲಿ ಮೊತ್ತವೇ ಕಾರಣ. ಮುಕ್ತ ಕೂಲಿ ಮೊತ್ತಕ್ಕಿಂತ ಉದ್ಯೋಗ ಖಾತರಿ ಯೋಜನೆ ಕೂಲಿ ಕಡಿಮೆ ಇರುವುದರಿಂದ ಯೋಜನೆಯಡಿ ಕೆಲಸ ಪಡೆಯಲು ಹೆಚ್ಚು ಜನರು ಮುಂದೆ ಬರುತ್ತಿಲ್ಲ. ಇದೂವರೆಗೂ ಯಾರು ಕೂಡ ಕೂಲಿ ನೀಡಿಲ್ಲ ಎಂದು ದೂರು ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅವ್ಯವಹಾರ ನಡೆಸಿದ ಆರೋಪದ ಮೇಲೆ ಈವರೆಗೂ 17 ಕಾರ್ಯನಿರ್ವಹಣಾಧಿಕಾರಿ, ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್, 59 ಸಹಾಕಯಕ ಎಂಜಿನಿಯರ್, 12 ಪಿಡಿಒ, 48 ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಈ ವರ್ಷ ಒಟ್ಟು 612 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯೋಜನೆಯಲ್ಲಿ ಲೋಪವಾಗದಂತೆ ಹಲವು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.